ಮಡಿಕೇರಿ, ಫೆ. 1 : ರಾಜ್ಯ ಉಚ್ಚ ನ್ಯಾಯಾಲಯ ಮರಗಳನ್ನು ಇ-ಹರಾಜು ಮಾಡದಂತೆ ತಡೆಯಾಜ್ಞೆ ನೀಡಿದ್ದರೂ ಕೊಡಗು ಅರಣ್ಯ ಇಲಾಖೆ ಇದೇ ಫೆ. 9 ರಂದು ಇ- ಹರಾಜಿಗೆ ಮುಂದಾಗಿದ್ದು, ಈ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಿ ಬಹಿರಂಗ ಹರಾಜು ನಡೆಸಬೇಕೆಂದು ಸಣ್ಣ ಬೆಳೆಗಾರರ ಸಂಘದ ಉಪಾಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017 ಸೆ.8 ರಂದು 18 ವಂದಿ ರೈತರು ಇ-ಹರಾಜಿನ ವಿರುದ್ಧ ಸಲ್ಲಿಸಿದ ರೀಟ್ ಅರ್ಜಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಇ-ಹರಾಜಿನಲ್ಲಿ ಬೆರಳೆಣಿಕೆಯಷ್ಟು ಮಂದಿ ಅಥವಾ ಸ್ಪರ್ಧಿಯೇ ಇಲ್ಲದೆ ಏಕಮಾತ್ರ ವ್ಯಕ್ತಿ ಪಾಲ್ಗೊಳ್ಳುವ ಸಾಧ್ಯತೆ ಇರುವದರಿಂದ ಸರ್ಕಾರಕ್ಕೆ ನಷ್ಟ ಉಂಟಾಗಲಿದೆ. ಬಹಿರಂಗ ಹರಾಜಿನಲ್ಲಿ ಹೆಚ್ಚಿನ ಮಂದಿ ಪಾಲ್ಗೊಳ್ಳುವದರಿಂದ ಹೆಚ್ಚು ಆದಾಯವನ್ನು ನಿರೀಕ್ಷಿಸಬಹುದಾಗಿದೆ. ಕೊಡಗು ಜಿಲ್ಲಾ ಟಿಂಬರ್ ಮರ್ಚೆಂಟ್ಸ್ ಅಂಡ್ ಪ್ಲಾಂಟರ್ಸ್ ಅಸೋಸಿಯೇಷನ್ ಇದೇ ಜ. 3 ರಂದು ಕೊಡಗಿನ ಕೃಷಿಕರ ಹಿತದೃಷ್ಟಿಯಿಂದ ಬಹಿರಂಗ ಹರಾಜು ನಡೆಸುವಂತೆ ಮನವಿ ಮಾಡಿಕೊಂಡಿತ್ತು. ಅಲ್ಲದೇ 2017 ಜ. 20 ರಂದು ಗದಗ ಜಿಲ್ಲೆ, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲಾ ಸಾಮಿಲ್ಸ್ ವರ್ತಕರು ಅರಣ್ಯ ಇಲಾಖೆಯ ರಾಜ್ಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಇ-ಹರಾಜಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದು ಯಾವದನ್ನೂ ಲೆಕ್ಕಿಸದೆ ಕೊಡಗಿನ ಅರಣ್ಯ ಅಧಿಕಾರಿಗಳು ಯಾರನ್ನೊ ಮೆಚ್ಚಿಸುವದಕ್ಕಾಗಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಇ-ಹರಾಜಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಅರಣ್ಯ ಸಚಿವರ ರಮಾನಾಥ್ ರೈ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಕಾಫಿ ಹಾಗೂ ಕರಿಮೆಣಸು ಬೆಲೆ ಕುಸಿತದಿಂದ ಜಿಲ್ಲೆಯ ಬೆಳೆಗಾರರು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದು, ಸರ್ಕಾರ ಬೆಳೆಗಾರರ ರಕ್ಷಣೆಗೆ ಬರಬೇಕೆಂದು ಒತ್ತಾಯಿಸಿದರು.

ಸಂತಾನಹರಣ ಮಾಡಿ : ಕಾಡಾನೆ ಹಾವಳಿ ಬಗ್ಗೆ ಪ್ರಸ್ತಾಪಿಸಿದ ನಂದಾ ಸುಬ್ಬಯ್ಯ, ಕಾಡಾನೆ ತುಳಿತದಿಂದ ಮೃತರಾದ ಮೋಹನ್ ದಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯ ಅಧಿಕಾರಿಗಳ ವಿರುದ್ಧ ಎಫ್.ಐ.ಆರ್. ದಾಖಲಾಗಿರುವದನ್ನು ಪ್ರಶ್ನಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕಾರಿಗಳು ಪತ್ರ ಬರೆದಿರುವದನ್ನು ಖಂಡಿಸುವದಾಗಿ ನಂದಾ ಸುಬ್ಬಯ್ಯ ತಿಳಿಸಿದರು.

ಜಿಲ್ಲೆಯಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಾಗಿದ್ದು, ಸಂತಾನಹರಣವೇ ಸೂಕ್ತ ಪರಿಹಾರವೆಂದು ಅಭಿಪ್ರಾಯಪಟ್ಟ ಅವರು ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದಿಂದ ಕಾಡಾನೆ ಚಲನ ವಲನಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಡಿ.ಪಿ.ಗಣಪತಿ ಉಪಸ್ಥಿತರಿದ್ದರು.