ವರದಿ: ಎ.ಎನ್ ವಾಸು
ಸಿದ್ದಾಪುರ, ಫೆ. 1: ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, ಅರಣ್ಯ ಇಲಾಖೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ರೈತರ, ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಇಲ್ಲಿನ ಕೊಡವ ಕಲ್ಚರಲ್ ಅಸೋಸಿಯೇಷನ್‍ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೋರಾಟದ ಬಗ್ಗೆ ಚರ್ಚಿಸಲಾಗಿ, ತಾ. 23 ರಂದು ಅರಣ್ಯ ಭವನ ಮುತ್ತಿಗೆ ಹಾಗೂ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಚರ್ಚಿಸಲಾಯಿತ್ತು.
ಸಭೆಯಲ್ಲಿ ಸಮಿತಿಯ ಕಾನೂನು ಸಲಹೆಗಾರ ಹೇಮಚಂದ್ರ ಮಾತನಾಡಿ, ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸಾವುನೋವುಗಳು ಹೆಚ್ಚಾಗಿವೆ. ಈಗಾಗಲೇ ಅರಣ್ಯ ಇಲಾಖೆಯ ವಿರುದ್ಧ ಸಾಂಕೇತಿಕ ಪ್ರತಿಭಟನೆ ಮಾಡಲಾಗಿದ್ದು, ಅರಣ್ಯ ಇಲಾಖೆ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ. ಜಿಲ್ಲೆಯ ಎಲ್ಲಾ ಭಾಗದ ರೈತರು, ಕಾರ್ಮಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸಾವಿರಾರು ಜನರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಬೇಕೆಂದರು.
ಕಾರ್ಮಿಕ ಮುಖಂಡ ಭರತ್ ಮಾತನಾಡಿ, ಬೃಹತ್ ಪ್ರತಿಭಟನೆಗೂ ಮುಂಚಿತವಾಗಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಬೇಕು. ಜಿಲ್ಲಾಕೇಂದ್ರವಾದ ಮಡಿಕೇರಿಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ, ಜಿಲ್ಲೆಯ ಎಲ್ಲರ ಸಮಸ್ಯೆಯಾಗಿರುವ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಕಾರ್ಮಿಕರು ಹಾಗೂ ಬೆಳೆಗಾರರು ಒಟ್ಟಾಗಿ ಹೋರಾಟ ಮಾಡಬೇಕು. ಪ್ರತಿಭಟನೆಗೆ ಹೆಚ್ಚು ಕಾರ್ಮಿಕರನ್ನು ಕರೆತರುವ ಬಗ್ಗೆ ಪ್ರಸ್ತಾಪಿಸಿದರು.
ಸಮಿತಿಯ ಸಂಚಾಲಕ ಪ್ರವೀಣ್ ಬೋಪಯ್ಯ ಮಾತನಾಡಿ, ಇತ್ತೀಚೆಗೆ ಕರಡಿಗೋಡುವಿನ ಬೆಳೆಗಾರ ಮೋಹನ್‍ದಾಸ್, ಕಾಡಾನೆ ಧಾಳಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಪ್ರಕರಣ ದಾಖಲಾಗಿದ್ದರೂ ಈವರೆಗೂ ಅಧಿಕಾರಿಗಳನ್ನು ಬಂಧಿಸಿಲ್ಲ. ವಿಚಾರಣೆ ಕೂಡ ನಡೆಸಿರುವದಿಲ್ಲ. ಪ್ರಕರಣವನ್ನು ಹಿಂಪಡೆಯಬೇಕೆಂದು ಅಧಿಕಾರಿಗಳ ಸಂಘ ರಾಜ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಹೋರಾಟ ಸಮಿತಿಯ ವತಿಯಿಂದ ಕೂಡ ರಾಜ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದರು.
ಬೆಳೆಗಾರ ದೇವಣಿರ ಸುಜಯ್ ಮಾತನಾಡಿ, ಪ್ರತಿಭಟನೆಯ ಪೂರ್ವಬಾವಿ ಸಭೆ ಬಗ್ಗೆ ಜಿಲ್ಲಾದ್ಯಂತ ಮಾಹಿತಿ ನೀಡಬೇಕು. ಹಾಗೂ ಪ್ರತಿಭಟನೆಗೂ ಜಿಲ್ಲೆಯ ಎಲ್ಲ ಭಾಗದಿಂದ ಜನರನ್ನು ಸೇರಿಸಬೇಕು ಎಂದರು.
ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ ಮಾತನಾಡಿ, ಅರಣ್ಯ ಇಲಾಖೆ ಸೇರಿದಂತೆ ಶಾಸಕರು, ಸಂಸದರು, ಉಸ್ತವಾರಿ ಸಚಿವರು, ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗಿದೆ. ನೆರೆಯ ಹಾಸನ ಜಿಲ್ಲೆಯ ಶಾಸಕರ ಹೋರಾಟದ ಫಲವಾಗಿ 30 ಕಾಡಾನೆಗಳನ್ನು ಹಿಡಿಯಲಾಗಿದೆ. ಆದರೆ ಜಿಲ್ಲೆಯ ಶಾಸಕರು ಗಂಭೀರ ಸಮಸ್ಯೆ ಬಗ್ಗೆ ಸದನದಲ್ಲಿ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದರು.
ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ ರಮೇಶ್ ಮಾತನಾಡಿ, 2008 ರಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ 360 ಕೋಟಿ ರೂ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಹೋರಾಟ ಸಮಿತಿಯ ಖಜಾಂಚಿಯಾಗಿ ಸಣ್ಣ ಬೆಳೆಗಾರರ ಸಂಘದ ಕಾರ್ಯದರ್ಶಿ ಕಂಬೀರಂಡ ನಂದಾ ಗಣಪತಿ ಅವರನ್ನು ಆಯ್ಕೆ ಮಾಡಲಾಯಿತ್ತು.
ಈ ಸಂದರ್ಭ ಬುಟ್ಟಿಯಂಡ ಹರಿ ಸೋಮಯ್ಯ, ಮಂಡೇಪಂಡ ಅರ್ಜುನ್ ತಿಮ್ಮಯ್ಯ, ನಡಿಕೇರಿಯಂಡ ಮಾಚಯ್ಯ, ಕುಕ್ಕುನೂರು ಪ್ರಭಾಕರ, ಸೋಮಣ್ಣ, ಎಂ.ಎಸ್ ಕಾರ್ಯಪ್ಪ, ಕೀತಿಯಂಡ ಅಪ್ಪಚ್ಚು, ರೆಜಿತ್ ಕುಮಾರ್ ಗುಹ್ಯ, ತರುಣ್, ಬೈಜು ಸೇರಿದಂತೆ ಬೆಳೆಗಾರರು ಹಾಗೂ ಕಾರ್ಮಿಕ ಮುಖಂಡರು ಹಾಗೂ ಸ್ಥಳೀಯರು ಇದ್ದರು.