ವೀರಾಜಪೇಟೆ, ಫೆ. 1: ಮಾನವನಿಗೆ ಶುದ್ಧವಾದ ಗಾಳಿ, ನೀರು,ದೈನಂದಿನ ಆಹಾರ ದೊರಕಬೇಕಾದರೆ ಪ್ರತಿಯೊಬ್ಬರು ಪರಿಸರವನ್ನು ಸಂರಕ್ಷಿಸುವ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕು ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮೋಹನ್‍ಪ್ರಭು ಹೇಳಿದರು.
ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘದ ಆಶ್ರಯದಲ್ಲಿ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪರಿಸರಕ್ಕೆ ನಾವುಗಳು ಬೇಡವಾದರೂ ನಮಗೆ ಪರಿಸರದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ವಾಹನಗಳ ಹೊಗೆಯಿಂದ ಗಾಳಿ ಮಾಲಿನ್ಯವಾಗುತ್ತಿದೆ. ನಾವು ಸೇವಿಸುವ ಗಾಳಿ ಶುದ್ಧವಾಗಿರಬೇಕು. ಇನ್ನೂ ಕೆಲವರು ಅಲ್ಲಿ-ಇಲ್ಲಿ ಕಸಗಳನ್ನು ಎಸೆಯುತ್ತಿದ್ದು ಸ್ವಚ್ಛತೆಗೆ ಭಂಗ ತರುತ್ತಿದ್ದಾರೆ. ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಮನುಷ್ಯನ ಮನುಸ್ಸು ಬದಲಾಗಬೇಕು. ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎನ್.ಜಿ.ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಾತ್ಮ ಗಾಂಧೀಜಿ ಅವರ ಕನಸನ್ನು ನನಸು ಮಾಡಲು ಪ್ರತಿಯೊಬ್ಬರೂ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಹರಿಸಬೇಕು. ಕೆಲವರು ಸ್ವಚ್ಛತೆಯ ಬಗ್ಗೆ ಮುಖ್ಯ ರಸ್ತೆಯಲ್ಲೇ ಬಾಷಣ ಬಿಗಿದು ಪಟಾಕಿ ಸಿಡಿಸಿ ಕಸವನ್ನು ಅಲ್ಲಿಯೇ ಬಿಟ್ಟು ಹೋಗುವವರಿದ್ದಾರೆ. ನಾವುಗಳು ಪರಿಸರವನ್ನು ಉಳಿಸದಿದ್ದರೆ ಮುಂದೆ ಅದು ನಮ್ಮನ್ನು ನಾಶ ಮಾಡುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಮಾತನಾಡಿ ನಮ್ಮ ಮನೆಯ ಸ್ವಚ್ಛತೆಯನ್ನು ಕಾಪಾಡಿಕೊಂಡು ಇನ್ನೊಬ್ಬರಿಗೆ ತೊಂದರೆ ಮಾಡ ಬಾರದು ಮನೆಯ ಕಸ ಪ್ಲಾಸ್ಟಿಕ್ ಇತರ ತ್ಯಾಜ್ಯಗಳನ್ನು ರಸ್ತೆ ಬದಿ ಸಾರ್ವಜನಿಕ ಸ್ಥಳಗಳಲ್ಲಿ ಹಾಕುವದು ಸರಿಯಲ್ಲ. ಪರಿಸರ ಉಳಿಸುವದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅಪರ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಮನು ಮತ್ತು ವಕೀಲರ ಸಂಘದ ಉಪಾಧ್ಯಕ್ಷ ವಿ.ಜಿ.ರಾಕೇಶ್ ಮಾತನಾಡಿದರು. ಸಂಘದ ಕಾರ್ಯದರ್ಶಿ ಬಿ.ಎನ್.ಸುಬ್ಬಯ್ಯ ಇತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನದ ಅಂಗವಾಗಿ ಸಭೆಯಲ್ಲಿ ಮೌನ ಆಚರಿಸಲಾಯಿತು. ನ್ಯಾಯಾಲಯದ ಸಿಬ್ಬಂದಿ ಮಾಲಶ್ರೀ ಸ್ವಾಗತಿಸಿ, ರಾಜಶೇಖರ ಮೂರ್ತಿ ನಿರೂಪಿಸಿ ದರೆ, ಹೇಮಲತ ವಂದಿಸಿದರು. ಕಾರ್ಯಕ್ರಮದ ನಂತರ ಸಮುಚ್ಚಯ ನ್ಯಾಯಾಲಯಗಳ ನ್ಯಾಯಾಧೀಶರು ಗಳು, ಹಿರಿಯ ವಕೀಲರುಗಳು ವಕೀಲರ ವೃಂದ ಪೊರಕೆ ಹಿಡಿದು ನ್ಯಾಯಾಲಯದ ಸಭಾಂಗಣವನ್ನು ಶುಚಿಗೊಳಿಸಿದರು.