ಗೋಣಿಕೊಪ್ಪಲು,ಜ.31 : ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡು, ಪಡಿಕಲ್ ಜಂಕ್ಷನ್ ಇತರೆ ಪ್ರದೇಶದಲ್ಲಿ ಕಳೆದ 4 ದಿನಗಳಿಂದ ಕಾಡುಕೋಣವೊಂದು ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಭಯಭೀತರಾಗಿರುವದಾಗಿ ಮಾಜಿ ಜಿ.ಪಂ.ಸದಸ್ಯ ಕೊಲ್ಲೀರ ಧರ್ಮಜ ಹಾಗೂ ಜೆಪ್ಪೆಕೋಡಿ ರಾಜಾ ಅವರು ತಿಳಿಸಿದ್ದಾರೆ.

ತಾ.28 ರಂದು ರಾಜಾ ಅವರು ತೋಟದಲ್ಲಿ ಕಾಡುಕೋಣ (ಕಾಟಿ) ಕಂಡು ಬಂದಿದ್ದು, ಈವರೆಗೆ ಯಾವದೇ ಹಾನಿ ಮಾಡದಿದ್ದರೂ ಪಾದಚಾರಿಗಳು ಭಯಭೀತಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕೈಕೇರಿ-ಅಮ್ಮತ್ತಿ ಮುಖ್ಯರಸ್ತೆಯಲ್ಲಿಯೂ ಕಾಡುಕೋಣ ರಾಜಾರೋಷವಾಗಿ ಓಡಾಟ ನಡೆಸಿದೆ. ತಿತಿಮತಿ ಅಥವಾ ಆನೆಚೌಕೂರು ಅರಣ್ಯ ವ್ಯಾಪ್ತಿಯಿಂದ ಆಹಾರವನ್ನು ಅರಸುತ್ತಾ ಇತ್ತ ಬಂದಿರಬಹುದು ಎಂದು ಶಂಕಿಸಲಾಗಿದೆ. ಹುಲಿ ಭಯದಿಂದಲೂ ಹಾದಿತಪ್ಪಿ ಇತ್ತ ಸುಳಿದಿರಬಹುದು ಎನ್ನಲಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ಇದ್ದು ಕಾಡುಕೋಣವನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆಯೂ ಇಲ್ಲವೆ ಕಳ್ಳಬೇಟೆಗೆ ಕಾಡುಕೋಣ ಸಿಲುಕುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟಿದ್ದಾರೆ.

-ವರದಿ: ಟಿ.ಎಲ್.ಎಸ್.