ಮಡಿಕೇರಿ, ಜ. 31: ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್, ಮಡಿಕೇರಿ ಬ್ಲಾಕ್ ಹಾಗೂ ನಗರ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸ ಲಾಯಿತು.

ನಗರದ ಎ.ವಿ. ಶಾಲೆ ಬಳಿಯಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆ ಸಾಗಿದ ಕಾಂಗ್ರೆಸ್ ಕಾರ್ಯಕರ್ತರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಚ್ಛೆದಿನ್ ತರುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಬಿಜೆಪಿ ಸರಕಾರದಿಂದ ಜನಸಾಮಾನ್ಯರಿಗೆ ಯಾವದೇ ರೀತಿಯ ಅಚ್ಛೆದಿನ್ ಬಂದಿಲ್ಲ. ಜನಧನ್ ಖಾತೆ ತೆರೆಯಿಸಿ ವಿದೇಶದಿಂದ ಕಪ್ಪು ಹಣ ತಂದು ಖಾತೆಗೆ ಜಮಾ ಮಾಡುವದಾಗಿ ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಾರ ಖಾತೆಗೂ ಹಣ ಜಮಾ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೇಂದ್ರ ಸರಕಾರದ ಆರ್ಥಿಕ ದ್ವಿಮುಖ ನೀತಿಯಿಂದಾಗಿ ದುಬಾರಿ ದರ ತೆತ್ತು ಆಹಾರ ಪದಾರ್ಥಗಳನ್ನು ಖರೀದಿಸುವ ಪರಿಸ್ಥಿತಿ ಇದ್ದು, ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆಯನ್ನು ಹೆಚ್ಚು ಮಾಡಿದೆ. 7 ತಿಂಗಳಿನಿಂದ ಇಲ್ಲಿಯವರೆಗೆ ರೂ. 10 ರಷ್ಟು ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿದ್ದು, ಬಸ್, ಲಾರಿ, ಆಟೋ ಇನ್ನಿತರೆ ಎಲ್ಲಾ ವಾಹನಗಳ ಮಾಲೀಕರು ಮತ್ತು ಚಾಲಕರ ವರ್ಗಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಲಾಯಿತು.

ಈ ಸಂದರ್ಭ ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಪ್ರಮುಖರಾದ ಟಿ.ಹೆಚ್. ಉದಯಕುಮಾರ್, ಜುಲೇಕಾಬಿ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಮಂಜುಳಾ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಡಿಕೇರಿ ಬ್ಲಾಕ್ ಅಧ್ಯಕ್ಷ ಅಪ್ರು ರವೀಂದ್ರ ಹಾಗೂ ಇನ್ನಿತರರು ಇದ್ದರು.ಸ್ವಉದ್ಯೋಗ ಕೈಗೊಳ್ಳುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಖಂಡನಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಬದಿ ಪಕೋಡ ಮಾಡುವದರೊಂದಿಗೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದರು.

ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗದೆ ನಿರುದ್ಯೋಗ ಸಮಸ್ಯೆ ಅಧಿಕಗೊಂಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟಿ.ಪಿ. ಚಾನಲ್‍ವೊಂದರಲ್ಲಿ ಸ್ವಉದ್ಯೋಗದ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಹೇಳಿಕೆ ನೀಡಿ ಪಕೋಡ ಮಾರಾಟ ಮಾಡುವದು ಕೂಡ ಒಂದು ಸ್ವಉದ್ಯೋಗ ಎಂದಿರುವದು ಖಂಡನೀಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಜ. ತಿಮ್ಮಯ್ಯ ವೃತ್ತದಲ್ಲಿ ಗ್ಯಾಸ್ ಸ್ಟೌವ್‍ನಲ್ಲಿ ಪಕೋಡ ತಯಾರು ಮಾಡಿ ಹಂಚಿ ಆಕ್ರೋಶ ವ್ಯಕ್ತಪಡಿಸಿದರು.

ಭಾಗಮಂಡಲ: ಭಾಗಮಂಡಲ ಮತ್ತು ಕುಂದಚೇರಿ ವಲಯ ಕಾಂಗ್ರೆಸ್ ವತಿಯಿಂದ ಭಾಗಮಂಡಲದಲ್ಲಿ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಇಟ್ಟು ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಈ ಸಂದರ್ಭ ವಲಯ ಕಾಂಗ್ರೆಸ್ ಅಧ್ಯಕ್ಷ ಕುದುಪಜೆ ಪ್ರಕಾಶ್, ನಾಪೋಕ್ಲು ಬ್ಲಾಕ್ ಕಾರ್ಯದರ್ಶಿ ಹ್ಯಾರಿಸ್, ಸುನಿಲ್ ಪತ್ರವೊ, ದೇವಂಗೋಡಿ ಹರ್ಷ, ತಿಲಕ ಸುಬ್ರಾಯ. ರವಿಹೆಬ್ಬಾರ್, ಕೆ.ಟಿ. ರಮೇಶ್, ಅಬ್ದುಲ್ ಲತಿಫ್, ಸುಕುಮಾರ್ ಭಟ್, ಅಕ್ಷಿತ್, ಟಿ.ಎಂ. ಖಾದರ್ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.