ಸೋಮವಾರಪೇಟೆ,ಜ.31: ರಾಷ್ಟ್ರದ ಸರ್ವಾಂಗೀಣ ಪರಿವರ್ತನೆ ಯುವ ಸಮುದಾಯದಿಂದ ಮಾತ್ರ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಯುವ ಜನಾಂಗ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.

ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ವತಿಯಿಂದ ಇಲ್ಲಿನ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವೇಕಾನಂದರ 155ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಗುರಿ ಹೊಂದಿರಬೇಕು. ಗುರಿ ಸಾಧನೆಗೆ ಸತತ ಪರಿಶ್ರಮ ಪಡಬೇಕು. ಗುಣಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಆ ಮೂಲಕ ಸಮಾಜ ಕಾರ್ಯಕ್ಕೂ ಕೈಜೋಡಿಸಬೇಕು ಎಂದು ರಂಜನ್ ಕಿವಿಮಾತು ಹೇಳಿದರು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಸಂಪರ್ಕಾಧಿಕಾರಿ ವೆಂಕಟೇಶ್ ಮುರೂರು ಅವರು, ಸ್ವಾಮಿ ವಿವೇಕಾನಂದರು ಸಂತರ ಸಂತರೆಂದೇ ಖ್ಯಾತಿಯಾಗಿದ್ದರು. ಸ್ವಾರ್ಥ ಬದಿಗಿಟ್ಟು ದೇಶದ ಹಿತ, ದೇಶದ ಸಮಸ್ಯೆಗಳ ಬಗ್ಗೆ ಮೂರು ದಿನಗಳ ಕಾಲ ಧ್ಯಾನಾಸಕ್ತರಾಗಿ ಪರಿವರ್ತನೆಯ ಉದ್ದೇಶದಿಂದ ದೇಶ ಸಂಚಾರ ಮಾಡಿದ ಕ್ರಾಂತಿಕಾರಿ ಎಂದು ಬಣ್ಣಿಸಿದರು.

ಪ್ರಸ್ತುತ ದೇಶಭಕ್ತಿಯನ್ನು ಮೂಡಿಸುವ ಶಿಕ್ಷಣದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಹಾಗೂ ಪೋಷಕರು ಗಮನಹರಿಸಬೇಕು. ಯುವ ಜನಾಂಗದ ಮೇಲೆ ಸಮಾಜಕ್ಕೆ ಬಹಳಷ್ಟು ನಿರೀಕ್ಷೆಯಿದ್ದು, ದೇಶಕ್ಕಾಗಿ ಬದುಕುವ ಮಾನಸಿಕತೆಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶನಿವಾರಸಂತೆ ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಆಡಂಬರ ಜೀವನಕ್ಕೆ ಮಾರು ಹೋಗದೆ ಆದರ್ಶಯುತ ಜೀವನದ ಬಗ್ಗೆ ಚಿಂತಿಸಬೇಕು. ವಿವೇಕಾನಂದರ ಮೌಲ್ಯಾದರ್ಶಗಳನ್ನು ಮನನ ಮಾಡಿ ಕೊಳ್ಳಬೇಕು. ಅವರ ವಿದ್ಯುತ್‍ವಾಣಿ ಗಳನ್ನು ಅನುಕರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್. ಸದಾನಂದ್ ವಹಿಸಿ ಮಾತನಾಡಿ, ಸಮಿತಿಯ ವತಿಯಿಂದ ಕಳೆದ 5 ವರ್ಷಗಳಿಂದ ವಿವೇಕಾನಂದರ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಸಮಿತಿಯ ಕಾರ್ಯದರ್ಶಿ ಎಸ್.ಮಹೇಶ್, ಖಜಾಂಚಿ ಮೃತ್ಯುಂಜಯ ಜಯಣ್ಣ, ವಿವೇಕಾನಂದ ಯುವ ಬ್ರಿಗೇಡ್‍ನ ಸಂಚಾಲಕ ಅಭಿಷೇಕ್ ಗೋವಿಂದಪ್ಪ ಉಪಸ್ಥಿತರಿದ್ದರು. ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್ ಪ್ರಾರ್ಥಿಸಿದರು.

ವಿವೇಕಾನಂದ ಜನ್ಮದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾ ನರ್ಸಿಂಗ್ ಸ್ಕೂಲ್ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಇಲ್ಲಿನ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ವೀರಗಾಸೆ, ಡೊಳ್ಳುಕುಣಿತ ತಂಡದೊಂದಿಗೆ ಶಾಲೆಗಳ ವಿದ್ಯಾರ್ಥಿಗಳು ಬ್ಯಾಂಡ್‍ಸೆಟ್‍ನೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.