ಕೂಡಿಗೆ, ಜ. 31: ಸಮೀಪದ ರಂಗಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೇ ಸ್ವತಃ ರಚಿಸಿದ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ಗಣರಾಜ್ಯೋತ್ಸವದಂದು ಪುಟ್ಟ ಮಕ್ಕಳೇ ಸ್ವತಃ ರಚಿಸಿದ ಕಾಡು ಮಲ್ಲಿಗೆ ಕವನ ಸಂಕಲನವನ್ನು ಸಾಹಿತಿ ಫ್ಯಾನ್ಸಿ ಮುತ್ತಣ್ಣ ಅನಾವರಣ ಮಾಡಿದರು.

ನಂತರ ಮಾತನಾಡಿದ ಅವರು ಹೆಸರಾಂತ ಸಾಹಿತಿಗಳ ಹಾಗೂ ಸ್ಥಳೀಯ ಸಾಹಿತಿಗಳ ಪುಸ್ತಕಗಳನ್ನು ಓದುವದನ್ನು ರೂಢಿಸಿಕೊಂಡು, ಮಕ್ಕಳು ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೊಂದು ಪ್ರತಿಭೆಗಳು ಅಡಗಿರುತ್ತವೆ. ಅದನ್ನು ಹೊರತರುವಲ್ಲಿ ಶಿಕ್ಷಕರ ಪ್ರಯತ್ನ ಮುಖ್ಯವಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಹಾಗೂ ಪೋಷಕರಿಗೆ ಹೆಮ್ಮೆ ತರುವಂತೆ ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಆರ್.ಕೆ. ಚಂದ್ರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಒಲವು ತೋರಿದರೆ ಶಿಕ್ಷಕರಿಗೂ ಪಾಠ ಪ್ರವಚನಗಳನ್ನು ಮಾಡುವ ಅಭಿಲಾಷೆ ಹೆಚ್ಚುತ್ತದೆ. ಇದಕ್ಕೆ ಪೋಷಕರ ಸಹಕಾರವೂ ಅಗತ್ಯ ಎಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳೇ ತಯಾರಿಸಿದ ವಸ್ತುಗಳ ವಸ್ತು ಪ್ರದರ್ಶನವನ್ನು ಕಾಫಿ ಬೆಳೆಗಾರ ಎಂ.ಕೆ. ಕುಶಾಲಪ್ಪ ಉದ್ಘಾಟಿಸಿದರು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮುಖ್ಯೋಪಾಧ್ಯಾಯಿನಿ ಜಯಂತಿ, ಶಿಕ್ಷಕರಾದ ಮೀನಾಕ್ಷಿ, ಸುನಿತ, ಸುಮಿತ್ರ, ಕುಂಞಮ್ಮ, ಉಷಾ ಮತ್ತು ಪೋಷಕರು, ವಿದ್ಯಾಥಿಗಳು ಇದ್ದರು.