ಮಡಿಕೇರಿ, ಜ. 30: ಏಳು ದಶಕದ ಹಿಂದೆ ಬಲಿದಾನಿಯಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಂಸ್ಮರಣೆಯೊಂದಿಗೆ ಇಂದು ಅವರ ಚಿತಾಭಸ್ಮ ಮೆರವಣಿಗೆ ಮೂಲಕ ಸರ್ವ ಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು. ಜಿಲ್ಲಾ ಆಡಳಿತ ಭವನದ ಖಜಾನೆ ಯಿಂದ ಗಾಂಧೀಜಿ ಚಿತಾಭಸ್ಮವನ್ನು ಗೌರವಪೂರ್ವಕವಾಗಿ ಮಾಲಾರ್ಪಣೆ ಯೊಂದಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ನೇತೃತ್ವದಲ್ಲಿ ಹೊರ ತರಲಾಯಿತು.ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಇಲಾಖೆಯಿಂದ ಗೌರವ ರಕ್ಷೆ ಬಳಿಕ ಸರ್ವೋದಯ ಸಮಿತಿ ಪ್ರಮುಖರು, ನಾಗರಿಕ ಮುಖಂಡರು, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಸಹಿತ ಮುಖ್ಯಬೀದಿಯಲ್ಲಿ ಜನರಲ್ ತಿಮ್ಮಯ್ಯ ವೃತ್ತ ಬಳಸಿ ಗಾಂಧಿಮಂಟಪಕ್ಕೆ ಮೆರವಣಿಗೆಯಲ್ಲಿ ಚಿತಾಭಸ್ಮ ಕೊಂಡೊಯ್ಯಲಾಯಿತು.

ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಚಿತಾಭಸ್ಮಕ್ಕೆ ಪ್ರಮುಖರು ಪುಷ್ಪಾರ್ಚನೆಗೈದು ಅನಂತರ

(ಮೊದಲ ಪುಟದಿಂದ) ಸರ್ವ ಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ಆಂಜನೇಯ ಗುಡಿ ಅರ್ಚಕ ಸಂತೋಷ್ ಭಟ್ ಭಗವದ್ಗೀತೆ ಪಠಿಸಿದರೆ, ಮಾದಾಪುರ ನಿರ್ಮಲ ಚರ್ಚ್‍ನ ಧರ್ಮಗುರು ಸಂತೋಷ್ ಬೈಬಲ್ ಹಾಗೂ ಇಸ್ಲಾಂ ಧರ್ಮಗುರು ಇಸಾಕ್ ಅಹ್ಮದ್ ಕುರಾನ್ ಪಠಿಸಿದರು.

ಸರ್ವಧರ್ಮ ಪ್ರಾರ್ಥನೆ ಬಳಿಕ ವಿದ್ಯಾರ್ಥಿಗಳು ಏಕತಾ ಸ್ತೋತ್ರಗಳನ್ನು ಪಠಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಸರ್ವೋದಯ ಸಮಿತಿ ಅಧ್ಯಕ್ಷ ಎಂ.ಎನ್. ಸುಬ್ರಮಣಿ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಸಚಿವ ಯಂ.ಸಿ. ನಾಣಯ್ಯ, ಪ್ರಮುಖರುಗಳಾದ ಕೋಡಿ ಚಂದ್ರಶೇಖರ್, ಅಂಬೆಕಲ್ ಕುಶಾಲಪ್ಪ, ಎ.ಸಿ. ದೇವಯ್ಯ, ಪ್ರಕಾಶ್ ಆಚಾರ್ಯ, ನವೀನ್ ಕುಶಾಲಪ್ಪ, ವೆಂಕಟೇಶ್, ಉಪವಿಭಾಗಾಧಿಕಾರಿ ನಂಜುಂಡೇಗೌಡ, ಡಿವೈಎಸ್‍ಪಿ ಸುಂದರರಾಜ್, ಪ್ರೊಬೆಷನರಿ ಎಸ್‍ಪಿ ಯತೀಶ್, ಸ್ಕೌಟ್ಸ್ ಆಯುಕ್ತ ಬೇಬಿ ಮ್ಯಾಥ್ಯೂ, ಇತರ ಪ್ರಮುಖರಾದ ಬಿ.ಎ. ಷಂಶುದ್ದೀನ್, ಎಸ್.ಎಸ್. ಸಂಪತ್‍ಕುಮಾರ್, ಮಣಜೂರು ಮಂಜುನಾಥ್, ವಾರ್ತಾಧಿಕಾರಿ ಚಿನ್ನಸ್ವಾಮಿ ಸೇರಿದಂತೆ ಗೈಡ್ಸ್ ವಿದ್ಯಾರ್ಥಿನಿಯರು, ಕಾರ್ಯದರ್ಶಿ ದಮಯಂತಿ, ಯತೀಶ್ ಮುಂತಾದವರು ಪಾಲ್ಗೊಂಡಿದ್ದರು. ಮಹಾತ್ಮ ಗಾಂಧೀಜಿ ಸಂಸ್ಮರಣೆ ಬಳಿಕ ಪೊಲೀಸ್ ಗೌರವದೊಂದಿಗೆ ಚಿತಾಭಸ್ಮವನ್ನು ಮರಳಿ ಖಜಾನೆಯಲ್ಲಿ ಇರಿಸಲಾಯಿತು.