ಮಡಿಕೇರಿ, ಜ. 30: ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರ ಆಪ್ತ ಬೆಂಬಲಿಗರಾದ ಸಹಕಾರಿ ಧುರೀಣ ಯಂ.ಪಿ. ಮುತ್ತಪ್ಪ ಹಾಗೂ ಮುನೀರ್ ಅಹಮ್ಮದ್ ಅವರ ಸಂಘಟನಾ ನೇತೃತ್ವದಲ್ಲಿ ಎಂ.ಸಿ. ನಾಣಯ್ಯ ಬೆಂಬಲಿಗರು ಮತ್ತು ಆಪ್ತರು ಜೆಡಿಎಸ್ ತೊರೆದು ಪರ್ಯಾಯ ಪಕ್ಷ ಸೇರ್ಪಡೆ ಕುರಿತು ಮಡಿಕೇರಿಯಲ್ಲಿ ಸಮಾಲೋಚನಾ ಸಭೆ ನಡೆಸಿದರು.ಚೇಂಬರ್ ಆಫ್ ಕಾಮರ್ಸ್‍ನ ಸಭಾಂಗಣದಲ್ಲಿ ಯಂ.ಸಿ. ನಾಣಯ್ಯ ಬೆಂಬಲಿಗರು ಮತ್ತು ಜೆಡಿಎಸ್‍ನಲ್ಲಿ ಗುರುತಿಸಿಕೊಂಡವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ ಮಾತನಾಡಿದ ಯಂ.ಸಿ. ನಾಣಯ್ಯ, ತಾನು ಈ ಸಭೆಗೆ ಬೇರೆ ಪಕ್ಷ ಸೇರ್ಪಡೆಯ ಬಗ್ಗೆ ತನ್ನ ನಿರ್ಧಾರ ಪ್ರಕಟಿಸಲು ಬಂದಿಲ್ಲ. ತಾವುಗಳು ಕೈಗೊಳ್ಳುವ ನಿರ್ಧಾರ ನನ್ನ ರಾಜಕೀಯ ತತ್ವ, ಸಿದ್ದಾಂತ. ಚಿಂತನೆಗಳಿಗೆ ಪೂರಕವಾಗಿದ್ದಲ್ಲಿ ಮಾತ್ರ ತನ್ನ ಹೇಳಿಕೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸು ವದಾಗಿ ಹೇಳಿ ಕಾಂಗ್ರೆಸ್ ಸೇರ್ಪಡೆಯ ನಿಲುವುಗಳನ್ನು ಬೆಂಬಲಿಗರ ಹೆಗಲಿಗೆ ವಹಿಸಿದರು.

1983ರಿಂದ 35 ವರ್ಷಗಳ ರಾಜಕೀಯ ಅನುಭವ ಹೊಂದಿದ್ದೇನೆ, ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ತತ್ವ ಚಿಂತನೆಗಳಿಂದ ಪ್ರಭಾವಿತನಾಗಿ ಇಂದಿಗೂ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ಪ್ರಸ್ತುತ ರಾಜ್ಯ ಮತ್ತು ದೇಶದಲ್ಲಿ ಕೋಮು ರಾಜಕೀಯ ಮೆರೆ ದಾಡುತ್ತಿದ್ದು, ಜಾತ್ಯತೀತ ನಿಲುವಿನ ಸಮಾಜವನ್ನು ಕಟ್ಟುವ ಅಗತ್ಯವಿದೆ. ಜಾತ್ಯತೀತ ನಿಲುವಿಗೆ ಬದ್ಧವಾಗಿರುವ ರಾಜಕೀಯ ಶಕ್ತಿಯೊಂದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಬೇಕಿದೆ ಎಂದು ನಾಣಯ್ಯ ಸಮರ್ಥಿಸಿಕೊಂಡರು.

ಬೆಂಬಲಿಗರು ಸಮರ್ಪಕವಾದ ಗಂಭೀರವಾದ ರಾಜಕೀಯ ಸಮಾಲೋಚನೆ ನಡೆಸಿ ಒಟ್ಟಾರೆ ಅಭಿಪ್ರಾಯವನ್ನು ತನಗೆ ತಿಳಿಸುವಂತೆ ಸಲಹೆ ನೀಡಿ ಸಭೆಯಿಂದ ನಿರ್ಗಮಿಸಿದರು.

ಬಳಿಕ ಸಭೆಯ ನೇತೃತ್ವವನ್ನು ವಹಿಸಿಕೊಂಡು ಮಾತನಾಡಿದ ಮುನೀರ್ ಅಹಮ್ಮದ್, ಇಂದು ನಾವೆಲ್ಲ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ, ಸಮಾಜವನ್ನು ತಮ್ಮ ರಾಜಕೀಯಕ್ಕಾಗಿ ಛಿದ್ರಮಾಡುವ ಶಕ್ತಿಗಳು ಹುಟ್ಟಿ ಕೊಳ್ಳುತ್ತಿವೆ.

(ಮೊದಲ ಪುಟದಿಂದ) ಜಿಲ್ಲೆಗೆ ಸಮಾನತೆಯನ್ನು ಪ್ರತಿಪಾದಿಸುವ ನಾಯಕರ ಅಗತ್ಯವಿದ್ದು, ಹಿರಿಯ ರಾಜಕೀಯ ಮುತ್ಸದ್ಧಿ ಯಂ.ಸಿ. ನಾಣಯ್ಯ ಮತ್ತು ಎ.ಕೆ. ಸುಬ್ಬಯ್ಯ ಅವರಲ್ಲಿ ಈ ಶಕ್ತಿ ಇದೆ ಆದ ಕಾರಣ ನಾಯಕತ್ವ ವಹಿಸಲು ಯಾವ ಜಾತ್ಯತೀತ ಪಕ್ಷಕ್ಕೆ ಬೆಂಬಲ ನೀಡಿ ಆ ಪಕ್ಷಕ್ಕೆ ಸೇರ್ಪಡೆ ಯಾಗಬೇಕೆನ್ನುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು ಸಭೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಬಂಟರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ, ಕಾಂಗ್ರೆಸ್ ಸೇರ್ಪಡೆ ಯಾದ ಬಳಿಕ ಆ ಪಕ್ಷದಲ್ಲಿರುವ ನಾಯಕರಿಂದ ನಾವುಗಳು ಪರಕೀಯರಾಗುವ ಸಂಭವವೂ ಇದೆ. ನಾಣಯ್ಯ ಮುಂದಾಳತ್ವ ವಹಿಸಿ ಕಾಂಗ್ರೆಸ್‍ಗೆ ಸೇರ್ಪಡೆಯಾದರೆ ನಾವು ಅವರನ್ನು ಹಿಂಬಾಲಿಸುವದಾಗಿ ಘೋಷಿಸಿದರು.

ಮಾಜಿ ಪುರಸಭಾ ಅಧ್ಯಕ್ಷ ಕೆ.ಜಿ. ಹರೀಶ್ ಮಾತನಾಡಿ, ನಾಣಯ್ಯ ಓರ್ವ ವ್ಯಕ್ತಿಯಲ್ಲ ಅವರೊಂದು ಸಂಸ್ಥೆಯಂತೆ, ಎಂಸಿಎನ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರೆ ಅವರಿಗೂ ಸೂಕ್ತ ಸ್ಥಾನಮಾನ ದೊರೆಯಬೇಕು. ಆ ಮೂಲಕ ಅವರ ಬೆಂಬಲಿಗರಿಗೂ ಪಕ್ಷದಲ್ಲಿ ಗೌರವ ದೊರೆಯುವಂತಾಗಬೇಕೆಂದರು.

ಯೂಸುಫ್ ಕೊಂಡಂಗೇರಿ ಮಾತನಾಡಿ, ಜೆಡಿಎಸ್ ಜಿಲ್ಲಾ ಘಟಕ ನಿಷ್ಠಾವಂತ ಹಿರಿಯ ಕಾರ್ಯ ಕರ್ತರನ್ನು ಕಡೆಗಣಿಸಿದೆ. ಎಂಸಿಎನ್ ಮುಂದಾಳತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವದು ಸೂಕ್ತ ಆದರೆ ಮೊದಲು ನಾಣಯ್ಯ ಅವರು ಕಾಂಗ್ರೆಸ್ ಸೇರ್ಪಡೆಯಾದರೆ ಮಾತ್ರ ತಾವು ಕಾಂಗ್ರೆಸ್ ಕಡೆ ಮುಖ ಮಾಡುವದಾಗಿ ಸ್ಪಷ್ಟಪಡಿಸಿದರು.

ಹಿರಿಯ ಸಹಕಾರಿ ಧುರೀಣ ಎಂ.ಪಿ.ಮುತ್ತಪ್ಪ ಮಾತನಾಡಿ, ಯಂ.ಸಿ.ನಾಣಯ್ಯ ಯಾವ ಪಕ್ಷವನ್ನು ಬೆಂಬಲಿಸುತ್ತಾರೋ ಆ ಪಕ್ಷವನ್ನು ಗೆಲ್ಲಿಸುವ ಶಕ್ತಿಯೂ ಅವರಲ್ಲಿದೆ. ನಾಣಯ್ಯ ಕಾಂಗ್ರೆಸ್ ಸೇರ್ಪಡೆಯಾದರೆ ತಾವೆಲ್ಲರೂ ಅವರನ್ನು ಹಿಂಬಾಲಿಸೋಣ ಎಂದರು. ಬಳಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಕೈ ಎತ್ತಿ ಬೆಂಬಲ ಸೂಚಿಸುವದರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಸಮ್ಮತಿ ವ್ಯಕ್ತಪಡಿಸಿದರು. ಸಭೆಯಲ್ಲಿ ಮೂಡಿಬಂದ ಒಮ್ಮತದ ತೀರ್ಮಾನವನ್ನು ದಾಖಲು ಮಾಡಿ ಎಂ.ಸಿ.ನಾಣಯ್ಯ ಅವರಿಗೆ ತಿಳಿಸುವ ಮೂಲಕ ಮುಂದಿನ ಒಂದು ವಾರದಲ್ಲಿ ಎಂ.ಸಿ.ನಾಣಯ್ಯ ಅವರ ಪಕ್ಷ ಸೇರ್ಪಡೆಯ ನಿಲುವನ್ನು ಬಹಿರಂಗ ಪಡಿಸಲು ಸರ್ವರೂ ಆಗ್ರಹಿಸೋಣ ಎಂದು ಹೇಳಿ ಮುನೀರ್ ಅಹಮ್ಮದ್ ಸಭೆಯನ್ನು ಬರಕಾಸ್ತುಗೊಳಿಸಿದರು.