ಕುಶಾಲನಗರ, ಜ. 31: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಪ್ರಥಮ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದಂತೆ ಕಂಡುಬಂತು. 24 ಪುಸ್ತಕಗಳನ್ನು ಪ್ರಕಟಿಸುವದರೊಂದಿಗೆ ಹಲವು ಪ್ರಶಸ್ತಿ, ಬಹುಮಾನಗಳಿಗೆ ಭಾಜನರಾದ 8ನೇ ತರಗತಿ ವಿದ್ಯಾರ್ಥಿಯೊಬ್ಬನಿಂದ ಸಮ್ಮೇಳನ ಉದ್ಘಾಟನೆ ಮಾಡಿಸಿದ್ದು ವಿಶಿಷ್ಟವಾಗಿತ್ತು.ಶಿವಮೊಗ್ಗದ ತೀರ್ಥಹಳ್ಳಿಯ ಬಾಲಪ್ರತಿಭೆ ಅಂತಃಕರಣ 8ನೇ ತರಗತಿ ವಿದ್ಯಾರ್ಥಿಯಾಗಿದ್ದು ಇದುವರೆಗೆ 340 ಅಂಕಣ ಪ್ರಬಂಧ, 93 ಕವಿತೆ, 78 ಕಥೆ, 1 ನಾಟಕ ಮತ್ತು 5 ಕಾದಂಬರಿಗಳನ್ನು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಬರೆಯುವ ಲೇಖಕ. ಈಗಾಗಲೆ 3 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 24 ಪುಸ್ತಕಗಳನ್ನು ಪ್ರಕಟಿಸಿರುವ ಪುಟ್ಟ ಸಾಹಿತಿ ಮೂಲಕ ಪ್ರಥಮ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೊಂಡಿತು.
ಮೆರವಣಿಗೆ: ಸಾಹಿತ್ಯ ಸಮ್ಮೇಳನದ ಅಂಗವಾಗಿ ಗುಡ್ಡೆಹೊಸೂರು ಸರಕಾರಿ ಶಾಲೆಯ ಆವರಣದಿಂದ ಸಮ್ಮೇಳನದ ವೇದಿಕೆ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯವರಗೆ ಮೆರವಣಿಗೆ ನಡೆಯಿತು. ಕು.ಪ್ರಣವ್ ಎಸ್. ಕಶ್ಯಪ್ಪ ಡೋಲು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕರ ಮೆರವಣಿಗೆ ಯೊಂದಿಗೆ ಡೊಳ್ಳುಕುಣಿತ, ವಿದ್ಯಾರ್ಥಿಗಳ ಛದ್ಮವೇಷ ಗಮನ ಸೆಳೆಯಿತು.
ಸಮ್ಮೇಳನದಲ್ಲಿ ಗೀತ ಗಾಯನ, ಕವಿಗೋಷ್ಠಿ, ವಿಚಾರಗೋಷ್ಠಿಗಳು ನಡೆದವು. ಗೀತಗಾಯನ ಅಧ್ಯಕ್ಷತೆಯನ್ನು ಸೋಮವಾರ ಪೇಟೆಯ ವಿದ್ಯಾರ್ಥಿನಿ ತನ್ವಿತಾಶೆಟ್ಟಿ ವಹಿಸಿದ್ದರು. ಹೆಚ್.ಜಿ.ಸಾಧನ ಉದ್ಘಾಟಿಸಿದರು. ಪರಿಷತ್ ಪ್ರಮುಖ ಎಸ್.ಎ. ಮುರಳೀಧರ್, ನಿರ್ದೇಶಕರಾದ ಶ್ರೀಧರ ನೆಲ್ಲಿತ್ತಾಯ, ಕೆ.ಆರ್. ಬಾಲಕೃಷ್ಣರೈ ಉಪಸ್ಥಿತರಿದ್ದರು.
ಕವಿಗೋಷ್ಠಿ ಬೆಸೂರು ಕೃತಜ್ಞ ಅಧ್ಯಕ್ಷತೆಯಲ್ಲಿ ನಡೆದು ಕಾಜೂರು ಸತೀಶ್ ಆಶಯ ನುಡಿಗಳಾಡಿದರು. 15 ಕ್ಕೂ ಅಧಿಕ ಬಾಲ ಕವಿಗಳು ಭಾಗವಹಿಸಿದ್ದರು.
(ಮೊದಲ ಪುಟದಿಂದ) ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷರಾದ ಕುಡೆಕಲ್ ಸಂತೋಷ್, ನಿರ್ದೇಶಕರಾದ ಕಿಗ್ಗಾಲು ಗಿರೀಶ್, ಶಾಲಿನಿ, ಗೌರಿ ಉಪಸ್ಥಿತರಿದ್ದರು.
ಅಕಾಡೆಮಿ ಸ್ಥಾಪಿಸಿ
ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಯನ್ನು ಮೂಡಿಸುವ ಮೂಲಕ ಕನ್ನಡಾಭಿಮಾನವನ್ನು ಬೆಳೆಸುವ ವಾತಾವರಣ ಸೃಷ್ಠಿಯಾಗಬೇಕಾದ ಅನಿವಾರ್ಯತೆ ಇದೆ ಎಂದು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕು. ವಿ.ಡಿ. ಸಿಂಚನಾ ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳಿಗೆ ಪ್ರಾರಂಭಿಕ ಶಿಕ್ಷಣವನ್ನು ಪ್ರಾದೇಶಿಕ ಭಾಷೆಯಲ್ಲಿ ನೀಡಬೇಕು. ಪೋಷಕರು ಇದನ್ನು ಪಾಲಿಸದೆ ಮಗುವಿನ ಭಾವನಾತ್ಮಕ ಮತ್ತು ಆಲೋಚನಾ ಸಾಮಥ್ರ್ಯವನ್ನು ಕೊಲ್ಲುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಬಾಲ್ಯದಲ್ಲಿಯೇ ಶಿಸ್ತು, ತಾಳ್ಮೆ, ಸಹನೆ, ಸಾಮರಸ್ಯ, ಸೌಹಾರ್ದತೆ, ಸಮಾನತೆಯ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವ ಪಾಠವನ್ನು ಕಡ್ಡಾಯವಾಗಿ ಕಲಿಸಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಅವರ ಆಸೆ, ಆಕಾಂಕ್ಷೆಗಳು ಮತ್ತು ಅವರ ಇಷ್ಟವಾದ ಕ್ಷೇತ್ರವನ್ನು ಗುರುತಿಸಿ ಅವರ ಸಾಧ್ಯನೆಗೆ ಪ್ರೇರೇಪಿಸುವದು ಎಲ್ಲರ ಕರ್ತವ್ಯವಾಗಿದೆ ಎಂದರು.
ತಾಯ್ನಾಡಿನ ಬಗ್ಗೆ ಹೆಮ್ಮೆಪಡುವ ಮಕ್ಕಳನ್ನು ತರಬೇತಿಗೊಳಿಸುವದೇ ನಿಜವಾದ ಶಿಕ್ಷಣ ಎಂದ ಕು.ಸಿಂಚನಾ, ಹಿರಿಯರಲ್ಲಿ ಕನ್ನಡಾಭಿಮಾನ ಬೆಳೆಸುವುದಕ್ಕಿಂತ ಬೆಳೆಸುವ ಮಕ್ಕಳಲ್ಲಿ ಸಾಹಿತ್ಯಾಭಿರುಚಿಯನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳು ಪ್ರಯೋಜನಕಾರಿಯಾಗಿವೆ ಎಂದರು.
ಹಿರಿಯ ಸಾಹಿತಿಗಳು ಮಕ್ಕಳ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಬಗ್ಗೆ ಸ್ಮರಿಸಿಕೊಂಡ ಸಿಂಚನಾ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಬಳಸಲೇ ಬಾರದು ಎಂಬ ನಿರ್ಭಂದ ವಿಧಿಸ ಬಾರದು. ಮಕ್ಕಳ ಸಾಹಿತ್ಯಾಸಕ್ತಿ ಬೆಳೆಸಲು ಸರಕಾರ ಮಕ್ಕಳ ಅಕಾಡೆಮಿ ಯನ್ನು ಸ್ಥಾಪಿಸಬೇಕು. ಮಕ್ಕಳ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿ ಸಾಹಿತ್ಯದಲ್ಲಿಯೂ ಸಾಧನೆ ಮಾಡಿದ ಶಿಕ್ಷಕರನ್ನು ಪ್ರತಿಯೊಂದು ಶಾಲೆಯಲ್ಲಿ ನೇಮಕ ಮಾಡಲು ಸರಕಾರ ಗಮನಹರಿ¸ Àಬೇಕಿದೆ ಎಂದರು.
- ವರದಿ ಚಂದ್ರಮೋಹನ್