ಸೋಮವಾರಪೇಟೆ, ಜ. 31: ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ತಾ. 3 ರಂದು ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ 8ನೇ ವರ್ಷದ ತಾಲೂಕು ಸಮಾವೇಶ ಮತ್ತು ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 1 ಗಂಟೆಗೆ ವಿಶ್ವರೂಪ ಕಲಾ ತಂಡದ ಎಂ.ಎಸ್. ಪುರುಷೋತ್ತಮ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, 2 ಗಂಟೆಗೆ ಸಭಾ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರಳೀಧರ್, ಕರವೇ ಸಾಹಿತ್ಯ ಘಟಕದ ಉಪಾಧ್ಯಕ್ಷೆ ಅನಿತಾ ಶುಭಾಕರ್ ಉದ್ಘಾಟಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ನಗರ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್ ವಹಿಸಲಿದ್ದು, ಅತಿಥಿಗಳಾಗಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಕಾಫಿ ಬೆಳೆಗಾರ ಕೆ.ಟಿ. ಸುರೇಶ್, ಠಾಣಾಧಿಕಾರಿ ಶಿವಣ್ಣ ಸೇರಿದಂತೆ ಇತರರು ಭಾಗವಹಿಸ ಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಧ್ಯಾಹ್ನ 2.30ಕ್ಕೆ ತಾಲೂಕು ಮಟ್ಟದ ಶಾಲಾ ಮಕ್ಕಳ ನೃತ್ಯೋತ್ಸವ ನಡೆಯಲಿದೆ. ಸಂಜೆ 6 ಗಂಟೆಗೆ ರಾಜ್ಯಮಟ್ಟದ ನೃತ್ಯೋತ್ಸವ ಸ್ಪರ್ಧೆಯ ಉದ್ಘಾಟನೆ ನಡೆಯಲಿದ್ದು, ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಭಾಗವಹಿಸಲಿದ್ದು, ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ಪತ್ರಕರ್ತ ಹೆಚ್.ಟಿ. ಅನಿಲ್, ಉದ್ಯಮಿ ನಾಗೇಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಸ್ತ್ರೀರೋಗ ತಜ್ಞ ಡಾ. ಶಿವಪ್ರಸಾದ್, ಆರಕ್ಷಕ ಇಲಾಖೆಯ ಹರೀಶ್, ಸಾರ್ವಜನಿಕ ಕ್ಷೇತ್ರದಲ್ಲಿ ನಾರಾಯಣ ಪೂಜಾರಿ, ನಿವೃತ್ತ ಸೈನಿಕ ಬೆಳ್ಳಿಯಪ್ಪ, ಸಮಾಜ ಸೇವೆಗಾಗಿ ಮಹಮ್ಮದ್ ಅವರುಗಳನ್ನು ಸನ್ಮಾನಿಸಲಾಗುವದು.
ಸೋಮವಾರಪೇಟೆ ತಾಲೂಕು ಕರವೇ ಹೋರಾಟದ ಸಾಕ್ಷ್ಯಚಿತ್ರ ಬಿಡುಗಡೆ, ಸ್ಥಳೀಯ ಪ್ರತಿಭೆ ಸಂದೀಪ್ ಕುಮಾರ್ ಕರ್ಕಳ್ಳಿ ಇವರ ಸ್ವರಚಿತ ‘ಈ ಸಂಜೆ’ ಧ್ವನಿಸುರುಳಿ ಹಾಗೂ ದೃಶ್ಯಾವಳಿ ಬಿಡುಗಡೆ, ಸಾಹಿತ್ಯ ಘಟಕದ ಕೆ.ಪಿ. ಸುದರ್ಶನ್ ಮತ್ತು ಶ್ರಾವಣಿ ಇವರ ಸ್ವರಚಿತ ಕವನ ಸಂಕಲನ ಬಿಡುಗಡೆ. ಕೊಡಗಿನ ಸಂಸ್ಕøತಿ ಬಿಂಬಿಸುವ ಸ್ವಾಗತ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದ್ದು, ಕರವೇ ತಾಲೂಕು ಕಾರ್ಯದರ್ಶಿ ರೋಹಿತ್ ಗೌಡ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಗೋಷ್ಠಿಯಲ್ಲಿ ಕರವೇ ತಾಲೂಕು ಉಪಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ನಗರ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಉಪಾಧ್ಯಕ್ಷ ಸಂತೋಷ್, ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್ ಅವರುಗಳು ಉಪಸ್ಥಿತರಿದ್ದರು.