ಶ್ರೀಮಂಗಲ, ಜ. 31: ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದ ಕಕ್ಕಟ್ಟು ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ವೇಳೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ನೇತೃತ್ವದಲ್ಲಿ ಮಂಗಳವಾರ ಮಧ್ಯರಾತ್ರಿ ಧಾಳಿ ನಡೆಸಿ ಮರಳು ತುಂಬಿ ಸಾಗಿಸಲು ಅಣಿಯಾಗುತ್ತಿದ್ದ ಎರಡು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಹಲವು ಸಮಯದಿಂದ ಈ ಪ್ರದೇಶದಲ್ಲಿ ನಿರಂತರವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಖಚಿತ ಮಾಹಿತಿಯ ಮೆರೆಗೆ ತಹಶೀಲ್ದಾರ್ ಗೋವಿಂದರಾಜು ನೇತೃತ್ವದ ತಂಡ ಮಂಗಳವಾರ
(ಮೊದಲ ಪುಟದಿಂದ) ರಾತ್ರಿ ಇಡೀ ಕಾರ್ಯಾಚರಣೆಗಿಳಿದು ಧಾಳಿ ನಡೆಸಿದೆ. ಈ ಸಂದರ್ಭ ಸ್ಥಳದಲ್ಲಿ (ಕೆ.ಎ.17 ಬಿ 9269) ಸಂಖ್ಯೆಯ ಟಿಪ್ಪರ್, (ಕೆ.ಎ.12ಬಿ 3161) ಸಂಖ್ಯೆಯ ಸ್ವರಾಜ್ ಮರಳು ಲಾರಿಯನ್ನು ಮರಳು ಸಹಿತ ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ಪ್ರಕರಣವನ್ನು ದಾಖಲಿಸಿ ಕಾನೂನಿನಂತೆ ಕ್ರಮಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನದಲ್ಲಿ ಸ್ಥಳ ಮಹಜರು ನಡೆಸಿ ಸಂಬಂಧಿಸಿದ ಜಾಗ ಹಾಗೂ ಲಾರಿ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು. ಅಕ್ರಮ ಮರಳು ಪ್ರಕರಣದಲ್ಲಿ ಈ ಮೊದಲು ಪ್ರಕರಣ ದಾಖಲಾಗಿದ್ದು ಕಂಡುಬಂದರೆ ಅವರ ಮೇಲೆ ರೌಡಿ ಶಿಟರ್ ಪ್ರಕರಣ ದಾಖಲಿಸುವದಾಗಿ ತಹಶೀಲ್ದಾರ್ ಎಚ್ಚರಿಕೆ ನೀಡಿದರು. ಕಾರ್ಯಚರಣೆಯಲ್ಲಿ ಪ್ರೋಬೆಶನರಿ ತಹಶೀಲ್ದಾರ್ ತ್ರೀನೇತ್ರ, ಹುದಿಕೇರಿ ಕಂದಾಯ ಪರಿವೀಕ್ಷಕ ಸಿ.ಎಂ.ನಿಶಾನ್ ಮತ್ತಿತರರು ಪಾಲ್ಗೊಂಡಿದ್ದರು.