ಸುಂಟಿಕೊಪ್ಪ, ಜ. 30: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಯಲ್ಲಿ ಸದಸ್ಯರ ಸಮನ್ವಯ ಕೊರತೆ ಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂಬುದಾಗಿ ಇಂದು ಜನವರಿ ತಿಂಗಳಿನಲ್ಲಿ ಕರೆದ ಕೊನೆಯ ತುರ್ತುಸಭೆಯಲ್ಲಿ ಕೋರಂ ಕೊರತೆಯಿಂದ ಸಭೆ ಮುಂದೂಡಿದು ಸಾಬೀತಾಗಿದೆ.

ಕೋಳಿ,ಕುರಿ, ಹಸಿಮೀನು, ಹಂದಿ ಮಾಂಸ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯಲು ಜನವರಿ ತಿಂಗಳಿನಲ್ಲಿ 3 ಸಾಮಾನ್ಯ ಸಭೆ ಸೇರಿದಂತೆ ಇಂದು ಕೊನೆಯದಾಗಿ ತುರ್ತು ಸಭೆಯನ್ನು ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅವರು ಕರೆದಿದ್ದರು. ಪ್ರಮುಖವಾಗಿ ತುರ್ತು ಅರ್ಜಿಯನ್ನು 3 ತಿಂಗಳಿನಿಂದ ಆಡಳಿತ ಮಂಡಳಿ ಪರಿಶೀಲಿಸಬೇಕಾಗಿತ್ತು. ಅದಕ್ಕೆಲ್ಲಾ ಇಂದಿನ ತುರ್ತು ಸಭೆ ಸದಸ್ಯರ ಕೋರಂ ಇಲ್ಲದೆ ಮುಂದೂಡಿದ್ದರಿಂದ ಗ್ರಾಮ ಪಂಚಾಯಿತಿಯ ಮುಂದಿನ ಹಣಕಾಸು ಸಾಲಿನ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದೆ.

ಜನವರಿ 11 ರಂದು ಸಾಮಾನ್ಯ ಸಭೆ ಕರೆದಾಗ 20 ಮಂದಿಯ ಗ್ರಾಮ ಪಂಚಾಯಿತಿಯಲ್ಲಿ ಕೇವಲ 9 ಮಂದಿ ಭಾಗವಹಿಸಿದ್ದರಿಂದ ಸಭೆಯನ್ನು ಕೋರಂ ಇಲ್ಲದೆ ಮುಂದೂಡಲಾಗಿತ್ತು. ಅನಂತರ ತಾ. 23 ರಂದು ಮತ್ತೆ ಸಭೆಯನ್ನು ಅಧ್ಯಕ್ಷರು ಕರೆದಾಗ ಸಭೆಗೆ 9 ಮಂದಿ ಹಾಜರಿದ್ದರು. ಮತ್ತೆ ಸಭೆಯನ್ನು ಮುಂದೂಡಲಾಗಿತ್ತು. ತಾ25 ರಂದು ಸಾಮಾನ್ಯ ಸಭೆ ಕರೆಯಲಾಗಿತ್ತು. 3 ಬಾರಿ ಸಭೆಗೆ ಗೈರು ಹಾಜರಾದರೆ ಸದಸ್ಯತ್ವ ರದ್ದಾಗುವ ಭೀತಿಯಿಂದ ಈ ಹಿಂದಿನ ಸಭೆಗೆ ಗೈರು ಹಾಜರಾದ 11 ಮಂದಿಯೂ ಹಾಜರಾದರು. ಆದರೆ ಇವರುಗಳು ತಗಾದೆ ತೆಗೆದು ತಮಗೆ ಅಧ್ಯಕ್ಷರ ಮೇಲೆ ವಿಶ್ವಾಸವಿಲ್ಲ ತಮ್ಮನ್ನು ಕಾಮಗಾರಿ ಸೇರಿದಂತೆ ಇತರೆ ಸಭೆಗಳಿಗೆ ಅಧ್ಯಕ್ಷರು ಕರೆಯುತ್ತಿಲ್ಲ, ಅಧ್ಯಕ್ಷರು ಸದಸ್ಯರುಗಳನ್ನು ಗೌರವದಿಂದ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಈ ಬಗ್ಗೆ ನಿರ್ಣಯಮಾತ್ರ ಗ್ರಾ. ಪಂ. ಪುಸ್ತಕದಲ್ಲಿ ದಾಖಲಿಸಿ ಸಭೆಯಿಂದ ಹೊರ ನಡೆದಿದ್ದರು. ತುರ್ತುಸಭೆ ಕರೆಯಲೂ ಆಗ್ರಹಿಸಿದರು.

ಆದರೆ ಇಂದು ಕರೆಯಲಾಗಿದ್ದ ತುರ್ತು ಸಭೆಗೆ 11 ಮಂದಿ ಸದಸ್ಯರುಗಳು ಗೈರು ಹಾಜರಾಗಿದ್ದರಿಂದ ಅಧ್ಯಕ್ಷರು ಸಭೆಯನ್ನು ಮುಂದೂಡಿದರು.

ಇಂದಿನ ಸಭೆಯಲ್ಲಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರು ಗಳಾದ ಕೆ.ಇ.ಕರೀಂ, ಬಿ.ಎಂ.ಸುರೇಶ್, ಸಿ.ಚಂದ್ರ, ಸೋಮಯ್ಯ, ನಾಗರತ್ನ ಸುರೇಶ್, ಗಿರಿಜಾ ಉದಯಕುಮಾರ್, ಜ್ಯೋತಿ ಭಾಸ್ಕರ್ ಅವರುಗಳು ಮಾತ್ರ ಹಾಜರಿದ್ದರು.

ಅಧ್ಯಕ್ಷರ ಹೇಳಿಕೆ: ತಾ.25 ರಂದು ಕರೆಯಲಾಗಿದ್ದ ಸಭೆಯಲ್ಲಿ ಮುಂದಿನ ಸಾಲಿನ ಅಂಗಡಿ ಮಳಿಗೆಗಳ ಕೋಳಿ, ಕುರಿ ಹಸಿಮೀನು, ಹಂದಿ ಮಾಂಸ ಮಳಿಗೆಗಳ ಹರಾಜು ಪ್ರಕ್ರಿಯೆ ಸಾರ್ವಜನಿಕ ಅರ್ಜಿ ವಿಲೇವಾರಿ ಸೇರಿದಂತೆ ಬಜೆಟ್ ಮಂಡನೆ ಅನುಮೋದನೆಗಾಗಿ ಸಭೆ ಕರೆದಿದ್ದರೂ, ಸದಸ್ಯರುಗಳ ಅಸಹಕಾರದಿಂದ ಸಭೆ ಮುಂದೂಡಲಾಯಿತು. ಇಂದು ಕರೆದ ತುರ್ತು ಸಭೆಗೆ ಕೋರಂ ಇಲ್ಲದೆ ಸಭೆ ಮುಂದೂಡಲಾಗಿದೆ ಮುಂದೆ ಮತ್ತೊಮ್ಮೆ ಸಾಮಾನ್ಯ ಸಭೆ ಕರೆಯಲಾಗುವದು ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಗ್ರಾ.ಪಂ.ಪಿಡಿಓ ಮೇದಪ್ಪ ಅವರು ಗ್ರಾಮ ಪಂಚಾಯಿತಿಯಲ್ಲಿ ಈ ತಿಂಗಳು ನಡೆದ ಸಾಮಾನ್ಯ ಸಭೆ ತುರ್ತು ಸಭೆಂiÀi ಆಗು ಹೋಗುಗಳನ್ನು ತಾ.ಪಂ. ಇಓ ಅವರಿಗೆ ವಿಸ್ತøತ ವರದಿ ಕಳುಹಿಸಲಾಗುವದೆಂದು ಪತ್ರಿಕೆಗೆ ಮಾಹಿತಿ ನೀಡಿದರು.

ಮಾಜಿ ಗ್ರಾ. ಪಂ. ಅಧ್ಯಕ್ಷ, ಹಾಲಿ ಸದಸ್ಯ ಕೆ.ಇ. ಕರೀಂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ದೃಷ್ಟಿಯಿಂದ ಜಿ.ಪಂ. ಸಿಇಓ ಅವರು ಮಧ್ಯ ಪ್ರವೇಶಿಸಲು ಕೋರಲಾಗುವದು ಎಂದರು.