ಮಡಿಕೇರಿ, ಜ. 30: ಭಾರತೀಯ ದೂರವಾಣಿ ಸಂಪರ್ಕ ನಿಗಮದಿಂದ ಮೊಬೈಲ್ ಟವರ್‍ಗಳನ್ನು ಪ್ರತ್ಯೇಕ ಗೊಳಿಸುವದರೊಂದಿಗೆ, ಸಮಾಜಕ್ಕೆ ಆಧಾರವಾಗಿರುವ ಗಾಡಿ (ಎತ್ತಿನ ಬಂಡಿ)ಯಿಂದ ಎತ್ತುಗಳನ್ನು ಮಾರಾಟಗೊಳಿಸಲು ಹೊರ ಟಂತಾಗಿದೆ ಎಂದು ಬಿಎಸ್ ಎನ್‍ಎಲ್ ನೌಕರರು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಇಂದಿನಿಂದ ಐದು ದಿನಗಳ ತನಕ ಮುಷ್ಕರ ಆರಂಭಿಸಿರುವ ನೌಕರರು, ಕೇಂದ್ರ ಸರಕಾರ ಬಿಎಸ್‍ಎನ್‍ಎಲ್ ನಿಂದ ಪ್ರತ್ಯೇಕ ಟವರ್ ನಿರ್ವಹಣೆ ವಿಭಾಗ ಸ್ಥಾಪಿಸದಂತೆ ಆಗ್ರಹಪಡಿಸಿ ದ್ದಾರೆ. ಆಧುನಿಕ ತಂತ್ರಜ್ಞಾನದೊಂದಿಗೆ ಖಾಸಗಿ ಉದ್ದಿಮೆಗಳೊಂದಿಗೆ ಪೈಪೋಟಿ ನಡುವೆ ಗ್ರಾಹಕರ ಹಿತದೊಂದಿಗೆ, ದೇಶ ಹಿತವನ್ನು ಕಾಪಾಡುವಲ್ಲಿ ಶ್ರಮಿಸುತ್ತಿರುವ ಬಿಎಸ್‍ಎನ್‍ಎಲ್

(ಮೊದಲ ಪುಟದಿಂದ) ಉದ್ಯೋಗಿಗಳ ಹಿತರಕ್ಷಣೆಗೆ ಕೇಂದ್ರ ಸರಕಾರ ಗಮನ ಹರಿಸುವಂತೆ ಬೇಡಿಕೆ ಮುಂದಿಟ್ಟು ಇಂದಿನಿಂದ ಐದು ದಿವಸ ಮುಷ್ಕರ ನಡೆಸುತ್ತಿರುವದಾಗಿ ಸತ್ಯಾಗ್ರಹ ನಿರತರು ಘೋಷಿಸಿದರು.

ಎತ್ತಿನ ಬಂಡಿ ಸಾಗಬೇಕಾದರೆ, ಎತ್ತುಗಳು ಎಷ್ಟು ಅವಶ್ಯಕವೋ ಆ ರೀತಿಯಲ್ಲಿ ಬಿಎಸ್‍ಎನ್‍ಎಲ್ ಮತ್ತು ದೂರವಾಣಿ ನಿರ್ವಹಣಾ ಗೋಪುರಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕೆಂದು ಪ್ರತಿಪಾದಿಸಿದ ನೌಕರರು, ಭವಿಷ್ಯದಲ್ಲಿ ಬಿಎಸ್‍ಎನ್‍ಎಲ್ ಎತ್ತಿಲ್ಲದ ಬಂಡಿಯಂತೆ ಆಗಬಾರದೆಂದು ಕಳವಳ ವ್ಯಕ್ತಪಡಿಸಿದರು.

ಈ ದಿಸೆಯಲ್ಲಿ ದೇಶವ್ಯಾಪ್ತಿ ಮುಷ್ಕರದಂತೆ ಇಂದು ಮಡಿಕೇರಿ ತಾಲೂಕು ನೌಕರರು, ತಾ. 31 ರಂದು (ಇಂದು) ಸೋಮವಾರಪೇಟೆ, ಫೆ. 1 ರಂದು ವೀರಾಜಪೇಟೆ ಹಾಗೂ ಸಿದ್ದಾಪುರ ವಲಯ ಫೆ. 2 ರಂದು ಗೋಣಿಕೊಪ್ಪಲು, ಫೆ. 3 ರಂದು ಕುಶಾಲನಗರ ನೌಕರರು ಸರದಿಯಲ್ಲಿ ಪ್ರತಿಭಟಿಸುವದಾಗಿ ಘೋಷಿಸಿದರು. ಬಿಎಸ್‍ಎನ್‍ಎಲ್ ಒಕ್ಕೂಟದ ವಿವಿಧ ಸಂಘಟನೆಗಳ ಪ್ರಮುಖರು ಐದು ದಿನಗಳ ಮುಷ್ಕರದ ನೇತೃತ್ವ ವಹಿಸಲಿದ್ದಾರೆ ಎಂದು ಪ್ರತಿಭಟನಾಕಾರರು ಮಾಹಿತಿ ನೀಡಿದರು.