ಮಡಿಕೇರಿ, ಜ. 30: ಕರ್ನಾಟಕ ರೈತ ಸಂಘದ ಎರಡು ದಿನಗಳ ರಾಜ್ಯ ಸಮ್ಮೇಳನ ಫೆ. 3 ಮತ್ತು 4 ರಂದು ಮಡಿಕೇರಿಯ ಕೂರ್ಗ್ ಕಮ್ಯುನಿಟಿ ಹಾಲ್‍ನಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಫೆ. 3ರ ಪೂರ್ವಾಹ್ನ 10.30ಕ್ಕೆ ನಗರದ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಸಮ್ಮೇಳನ ನಡೆಯುವ ಸಭಾಂಗಣದವರೆಗೆ ಪ್ರತಿನಿಧಿಗಳ ಮೆರವಣಿಗೆ ನಡೆಯಲಿದ್ದು, ಬಳಿಕ ನಡೆಯುವ ಸಮ್ಮೇಳನದಲ್ಲಿ ಅಖಿಲ ಭಾರತ ಕ್ರಾಂತಿಕಾರಿ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಠಾಕೂರ್, ಪ್ರಮುಖರಾದ ಆರ್. ಮಾನಸಯ್ಯ, ಕೇರಳದ ಅರ್ಥಶಾಸ್ತ್ರಜ್ಞ ಪಿ.ವಿ. ಜೇಮ್ಸ್, ಕೇರಳ ರಾಜ್ಯ ರೈತ ಸಂಘದ ಅಧ್ಯಕ್ಷ ಕುಂಞÂಕಣ್ಣನ್ ಮತ್ತಿತರರು ಭಾಗವಹಿಸಲಿದ್ದಾರೆ. ಫೆ. 4 ರ ಅಪರಾಹ್ನ ಕೃಷಿ ಕ್ಷೇತ್ರ ಬಿಕ್ಕಟ್ಟಿನ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಕೃಷಿ ಕ್ಷೇತ್ರದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಇಂದು ದೇಶದಲ್ಲಿ ಪ್ರತೀ ಅರ್ಧ ಗಂಟೆಗೊಬ್ಬ ರೈತ ಸಾವಿಗೀಡಾಗುತ್ತಿದ್ದು, ಸರಕಾರದ ಅಂಕಿಅಂಶಗಳ ಪ್ರಕಾರವೇ 1995ರಿಂದ ಈ ವರೆಗೆ ದೇಶಾದ್ಯಂತ ರೈತರ ಆತ್ಮಹತ್ಯೆಗಳ ಸಂಖ್ಯೆ 4ಲಕ್ಷಕ್ಕೂ ಅಧಿಕವಾಗಿದೆ. ಸ್ವತಂತ್ರ ಸಂಸ್ಥೆಗಳ ಅಧ್ಯಯನದ ಪ್ರಕಾರ ಇದು 10 ಲಕ್ಷಗಳನ್ನು ದಾಟಿದೆ.

ಕರ್ನಾಟಕ ರಾಜ್ಯ ಒಂದರಲ್ಲೇ ಸರಕಾರಿ ದಾಖಲೆಗಳ ಪ್ರಕಾರ ಪ್ರತೀದಿನ ಮೂರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ವಿಶ್ವ ವಾಣಿಜ್ಯ ಸಂಸ್ಥೆಯ ಆದೇಶಗಳೇ ಈ ವಿದ್ಯಮಾನಗಳಿಗೆ ನೇರ ಕಾರಣವಾಗಿದೆ ಎಂದು ನಿರ್ವಾಣಪ್ಪ ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಂಪೆನಿ, ಕಾರ್ಪೋ ರೇಟರಿಗೆ ಅನುಕೂಲವಾಗುವಂತಹ ಕೃಷಿ ನೀತಿಗಳನ್ನು ಜಾರಿಗೊಳಿಸುತ್ತಿದ್ದು, 1960ರಲ್ಲಿ ಶೇ. 50 ಕ್ಕಿಂತ ಹೆಚ್ಚಿನ ರಾಷ್ಟ್ರೀಯ ಆದಾಯ ಕೃಷಿಯಿಂದ ಬರುತ್ತಿದ್ದರೆ, 2013ರ ಸಮೀಕ್ಷೆ ಪ್ರಕಾರ ಕೃಷಿಯ ಆದಾಯ ಶೇ. 13.17ಕ್ಕೆ ಕುಸಿದಿದೆ ಎಂದು ನುಡಿದ ಅವರು, ಆದರೂ ಶೇ. 53.2 ರಷ್ಟು ದುಡಿಯುವ ಜನರು ಕೃಷಿಯೊಂದಿಗೆ ನೇರ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು.

ಕೇಂದ್ರದ ಯುಪಿಎ ಸರಕಾರ ನೇಮಿಸಿದ್ದ ಎಂ.ಎಸ್. ಸ್ವಾಮಿನಾಥ್ ನೇತೃತ್ವದ ಆಯೋಗವು, ರೈತರು ಕೃಷಿ ಉತ್ಪನ್ನಗಳನ್ನು ಬೆಳೆಯಲು ಖರ್ಚು ಮಾಡಿದ ವೆಚ್ಚಕ್ಕೆ ಶೇ.10ರಷ್ಟನ್ನು ಸೇರಿಸಿ ಬೆಲೆ ನಿಗದಿ ಮಾಡಬೇಕೆಂದು ಶಿಫಾರಸ್ಸು ಮಾಡಿದ್ದರೂ, ಈಗಿನ ಕೇಂದ್ರ ಸರಕಾರ ಈ ವರದಿಯನ್ನು ತಳ್ಳಿಹಾಕಿದೆ. ಕರ್ನಾಟಕದಲ್ಲಿ ಡಾ|| ಪ್ರಕಾಶ್ ಕಮ್ಮರಡಿ ನೇತೃತ್ವದಲ್ಲಿ ರಚಿಸಲಾದ ಕೃಷಿ ಬೆಲೆ ಆಯೋಗ, ಒಂದು ಕ್ವಿಂಟಾಲ್ ಭತ್ತ ಬೆಳೆಯಲು 1671 ರೂ. ಖರ್ಚಾಗುತ್ತಿದ್ದು, ಇದಕ್ಕೆ ಶೇ.50ರಷ್ಟನ್ನು ಸೇರಿಸಿ ಬೆಲೆ ನಿಗದಿ ಮಾಡಬೇಕೆಂದು ಶಿಫಾರಸ್ಸು ಮಾಡಿದ್ದರೂ, ಸರಕಾರ ಆಯೋಗದ ವರದಿಯನ್ನು ಜಾರಿಗೆ ತರದೆ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಂಪೆನಿ ಕಾರ್ಪೋರೇಟ್‍ಗಳು ಮತ್ತು ಬಲಿಷ್ಠರು ಅತಿಕ್ರಮಿಸಿಕೊಂಡಿರುವ 20 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಬಡವರಿಗೆ ಹಂಚಿಕೆ ಮಾಡಬೇಕೆಂದು ನಿರಂತರವಾಗಿ ಹೋರಾಟ ನಡೆಸುತ್ತಿದೆ. ಲಕ್ಷಾಂತರ ಕುಟುಂಬಗಳು ಕಳೆದ 30 ವರ್ಷಗಳಿಂದ 5ರಿಂದ 10 ಎಕರೆವರೆಗೆ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಗೆ ಪಟ್ಟಾ ನೀಡುವಂತೆ ಒತ್ತಾಯಿಸುತ್ತಿದ್ದರೂ, ಸರಕಾರ ಕಣ್ಣು ತೆರೆಯುತ್ತಿಲ್ಲ ಎಂದು ನಿರ್ವಾಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಅಖಿಲ ಭಾರತ ಮಟ್ಟದ ಮೂರನೇ ಸಮ್ಮೇಳನ ಮಾ. 11 ರಿಂದ 13ರವರೆಗೆ ರಾಯಚೂರಿನಲ್ಲಿ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಹಾಗೂ ಮೈಸೂರು ಜಿಲ್ಲಾ ಅಧ್ಯಕ್ಷ ಕಂದೆಗಾಲ ಶ್ರೀನಿವಾಸ್, ಆದಿವಾಸಿ ಮುಖಂಡ ಬಿ.ಕೆ.ಅಪ್ಪು, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್.ಮಂಜುನಾಥ್ ಹಾಗೂ ಕಾರ್ಯದರ್ಶಿ ಕೆ.ಟಿ.ಆನಂದ್ ಉಪಸ್ಥಿತರಿದ್ದರು.