ಗೋಣಿಕೊಪ್ಪ ವರದಿ, ಜ. 30 : ಮಾಯಮುಡಿ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ನಡೆಯುತ್ತಿದ್ದು, ಅಭಿವೃದ್ಧಿ ಸಹಿಸದ ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಪಿ.ಆರ್ ಪಂಕಜ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನನ್ನ ವ್ಯಾಪ್ತಿಗೆ ಒಳಪಡುವ ತಿತಿಮತಿ, ದೇವರಪುರ ಹಾಗೂ ಮಾಯಮುಡಿ ಭಾಗಗಳಿಗೆ ಯಾವದೇ ತಾರತಮ್ಯ ಮಾಡದೇ ಅನುದಾನವನ್ನು ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡುತ್ತಿದ್ದೇನೆ. ಜತೆಗೆ ವಿವಿಧ ಇಲಾಖೆಯ ಯೋಜನೆಯನ್ನು ಸದ್ಬಳಕೆ ಮಾಡಿದ್ದೇನೆ. 2016-17ನೇ ಸಾಲಿನಲ್ಲಿ 10 ಲಕ್ಷ 2017-18ನೇ ಸಾಲಿನಲ್ಲಿ 33.60 ಲಕ್ಷ ಹಣವನ್ನು ಮಾಯಮುಡಿ ಭಾಗಕ್ಕೆ ವಿನಿಯೋಗಿಸಲಾಗಿದೆ. ಮಾಯಮುಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 2ಲಕ್ಷ ವೆಚ್ಚದಲ್ಲಿ ಕೋಣನಕಟ್ಟೆ ಪೈಸಾರಿ ರಸ್ತೆ ಡಾಂಬರೀಕರಣ, ತಲಾ 1ಲಕ್ಷ ವೆಚ್ಚದಲ್ಲಿ ಮಸೀದಿ ಸಮೀಪದ ರಸ್ತೆ ಡಾಂಬರೀಕರಣ, ಪಶು ಚಿಕಿತ್ಸಾಲಯದ ಆವರಣಗೋಡೆ, ಪ್ರೌಢಶಾಲೆ ದುರಸ್ತಿ, ರಂಗಮಂದಿರ ನಿರ್ಮಾಣವನ್ನು 2016-17ನೇ ಸಾಲಿನಲ್ಲಿ ಮಾಡಲಾಗಿದೆ.

2017-18ನೇ ಸಾಲಿನಲ್ಲಿ 3ಲಕ್ಷ ವೆಚ್ಚದಲ್ಲಿ ರಾಮಮಂದಿರ ರಸ್ತೆ ಅಭಿವೃದ್ಧಿ, 2ಲಕ್ಷ ವೆಚ್ಚದಲ್ಲಿ ಕಮಟೆ ಮಹಾದೇಶ್ವರ ದೇವಾಲಯ ಸಾರ್ವಜನಿಕ ರಸ್ತೆ, 1.60 ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ನಿರ್ಮಾಣ, 1 ಲಕ್ಷ ವೆಚ್ಚದಲ್ಲಿ ಧನುಗಾಲ ಸರ್ಕಾರಿ ಶಾಲೆ ದುರಸ್ತಿ, ತಲಾ 5ಲಕ್ಷ ವೆಚ್ಚದಲ್ಲಿ ಬಸಪ್ಪ ಗಿರಿಜನ ಕಾಲೋನಿಗೆ, ಮಾರಿಯಮ್ಮ ಗಿರಿಜನ ಕಾಲೋನಿ, ಅಂಬುಗೋಟೆ ಗಿರಿಜನ ಕಾಲೋನಿ, ಬೆಳ್ಳಿ ಕಾಲೋನಿ, ರುದ್ರಬೀಡು ಪೈಸಾರಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿಕೆ ಮೂಲಕ ತಿಳಿಸಿದ್ದಾರೆ.