ಕೂಡಿಗೆ, ಜ. 31: ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸುಶಿಕ್ಷಿತ ಮನಸ್ಸುಗಳ ನಡುವೆ ಲಿಂಗ ತಾರತಮ್ಯ ಮನೋ ಭಾವನೆಯನ್ನು ಹೋಗಲಾಡಿಸಿ ಒಂದುಗೂಡಿಸುವ ನಿಟ್ಟಿನಲ್ಲಿ ಸಂಸ್ಥೆಯ ಸಮಿತಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಅಭಿಪ್ರಾಯಪಟ್ಟರು. ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರದಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಆ್ಯಂಟಿ ರ್ಯಾಗಿಂಗ್ ಸೆಲ್, ವುಮೆನ್ ಸೆಲ್ ಹಾಗೂ ಸ್ಪರ್ಶ್ನ ಸಹಯೋಗ ದೊಂದಿಗೆ ನಡೆದ ‘ಸಾಮಾಜಿಕ ಸಮಸ್ಯೆಗಳು-ಒಂದು ಕಿರು ನೋಟ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಪುರುಷ ಪ್ರಧಾನ ಸಮಾಜದ ಮೌಲ್ಯಗಳಿಂದ ಅಸಮಾನತೆಯಿಂದ ಲಿಂಗ ತಾರತಮ್ಯ ಮನೋಭಾವನೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸಬಲೀಕರಣಗೊಳಿಸುವದು ಅತ್ಯವಶ್ಯಕವಾಗಿದೆ. ನಾಗರಿಕತೆಯ ಬದಲಾವಣೆಯಲ್ಲಿ ಸ್ತ್ರೀಯರ ಪಾತ್ರ ಪ್ರಮುಖವಾಗಿದ್ದು ಅವರಿಗೆ ಉಚಿತ ಕಾನೂನು ಹಾಗೂ ಸೌಲಭ್ಯಗಳನ್ನು ಒದಗಿಸಿಕೊಡಬೇಕಾದ ಅಗತ್ಯತೆ ಇದೆ ಎಂದರು. ಸ್ಪರ್ಶ್ ಸೆಲ್ನ ಸಂಚಾಲಕಿ ಪ್ರೊ. ಮಂಜುಳ ಶಾಂತರಾಮ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ವುಮೆನ್ ಸೆಲ್ನ ಸಂಚಾಲಕಿ ಪ್ರೊ. ಐ.ಕೆ. ಮಂಜುಳ, ಆ್ಯಂಟಿ ರ್ಯಾಗಿಂಗ್ ಸೆಲ್ನ ಸಂಯೋಜಕ ಪ್ರೊ. ಚಂದ್ರಶೇಖರ್ ಜಿ. ಜೋಷಿ ಹಾಗೂ ಇತರರು ಇದ್ದರು.