ಮಡಿಕೇರಿ, ಜ. 31: ಜಾತ್ಯತೀತ ಜನತಾದಳದ ಮುಖಂಡರುಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಪಕ್ಷವನ್ನು ಪುನರ್ ಸಂಘಟಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಮುಂದಾಗಬೇಕೆಂದು ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಜಿಲ್ಲಾ ಘಟಕ ಒತ್ತಾಯಿಸಿದೆ.
ಜೆಡಿಎಸ್ ಪಕ್ಷದ ಬಲವರ್ಧನೆಗೆ ಪಕ್ಷದ ನಾಯಕರುಗಳಲ್ಲಿನ ವೈಮನಸ್ಸು ಅಡ್ಡಿ ಉಂಟು ಮಾಡುವ ಸಾಧ್ಯತೆಗಳು ಕಂಡು ಬರುತ್ತಿದೆ, ಜಿಲ್ಲೆಯ ಜೆಡಿಎಸ್ ನಾಯಕರುಗಳ ನಡುವಿನ ಅಸಮಾಧಾನವನ್ನು ಸರಿಪಡಿಸಲು ಸಾಧ್ಯವಾಗದೇ ಇರುವದರಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಜಿಲ್ಲೆಗೆ ಭೇಟಿ ನೀಡಬೇಕೆಂದು ಜಿಲ್ಲಾಧ್ಯಕ್ಷ ಚಿಲ್ಲನ ದರ್ಶನ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ನಗರದಲ್ಲಿ ನಡೆದ ಯುವ ಜೆಡಿಎಸ್ ಸಮಾವೇಶದಲ್ಲಿ ಜೆಡಿಎಸ್ ಪ್ರಮುಖ ಡಾ. ಯಾಲದಾಳು ಮನೋಜ್ ಬೋಪಯ್ಯ ಅವರನ್ನು ವೇದಿಕೆಗೆ ಕರೆಯದೆ ಕಡೆಗಣಿಸಲಾಗಿದೆ. ಸಮಾವೇಶದಲ್ಲಿ ಗೌರವಯುತ ಸ್ಥಾನ ನೀಡುವದಾಗಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಿಂದೆ ಭರವಸೆ ನೀಡಿದ್ದರು. ಆದರೆ ಜಿಲ್ಲಾ ನಾಯಕರು ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಈ ರೀತಿ ಮಾಡಿರುವದು ಸರಿಯಲ್ಲ ಎಂದರು. ಒಳ ರಾಜಕಾರಣದಿಂದ ಸಂಘಟನೆಯನ್ನು ಹಾಳು ಮಾಡುವ ಕಾರ್ಯ ನಡೆಯುತ್ತಿದೆ. ಇದು ಪಕ್ಷದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಅಭಿಮಾನಿ ಬಳಗದ ಪ್ರಮುಖರಾದ ಹೆಚ್. ಸುಂದರ್ ಹಾಗೂ ಲೋಕೇಶ್ ಉಪಸ್ಥಿತರಿದ್ದರು.