ಕಾಫಿ ಮಂಡಳಿ ಸದಸ್ಯ ಡಾಲಿ ಚಂಗಪ್ಪ
ಗೋಣಿಕೊಪ್ಪ ವರದಿ, ಜ. 31: ಕಾಫಿ ತೋಟಗಳಲ್ಲಿ ಮಣ್ಣು ಪರೀಕ್ಷೆ ಮಾಡದೆ ಗೊಬ್ಬರ ಉಪಯೋಗಿಸಿದರೆ ನಿರೀಕ್ಷಿತ ಪ್ರಮಾಣದ ಫಸಲು ಲಭಿಸುವದಿಲ್ಲ. ಬದಲಾಗಿ ಆರ್ಥಿಕ ನಷ್ಟದೊಂದಿಗೆ ಗೊಬ್ಬರದ ಅಂಶ ಕೂಡ ವ್ಯರ್ಥವಾಗುತ್ತದೆ ಎಂದು ಕಾಫಿ ಮಂಡಳಿ ಸದಸ್ಯ ಮಚ್ಚಮಾಡ ಡಾಲಿ ಚಂಗಪ್ಪ ಅಭಿಪ್ರಾಯಪಟ್ಟರು.
ಗೋಣಿಕೊಪ್ಪ ಕಕೂನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ಕಾಫಿ ಫಸಲು ಪಡೆಯಲು ಸುಮಾರು 15 ಬಗೆಯ ಲಘು ಪೋಷಕಾಂಶಗಳ ಅವಶ್ಯಕತೆಯಿದೆ ಎಂಬ ಸಾಮಾನ್ಯ ಜ್ಞಾನ ಪ್ರತಿ ಬೆಳೆಗಾರನಿಗೂ ಅವಶ್ಯಕ ಎಂದರು. ಮಣ್ಣು ಪರೀಕ್ಷೆ ಮೂಲಕ ರಸಸಾರದ ಅಂಶ ಮತ್ತು ಲಘು ಪೋಶಕಾಂಶದ ಪ್ರಮಾಣವನ್ನು ಅರಿತುಕೊಳ್ಳಬೇಕು ಎಂದರು.
ನಿಗದಿತ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸಿದರೆ ಗಿಡಗಳಿಂದ ಉತ್ತಮ ಸ್ಪಂದನೆ ದೊರೆಯುತ್ತದೆ. ಕೆಲವು ಬೆಳೆಗಾರರು ಕಾಫಿ ಗಿಡಗಳಿಗೆ ವರ್ಷಕ್ಕೆ 3-4 ಬಾರಿ ಗೊಬ್ಬರ ಪೂರೈಕೆ ಮಾಡಿದ ನಂತರವೂ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಗೊಬ್ಬರ ಖರೀದಿ ಮಾಡುವ ಮೊದಲು ಸಂಸ್ಥೆಯ ಸಂಪೂರ್ಣ ಮಾಹಿತಿ ಕಲೆ ಹಾಕಿ ನಂತರ ಖರೀದಿಸಿದರೆ ಮೋಸ ಹೋಗುವದನ್ನು ತಪ್ಪಿಸಬಹುದು ಎಂದು ಹೇಳಿದರು.
ಕೆ- ಮ್ಯಾಗ್ ಗೊಬ್ಬರವನ್ನು ಬಹಳ ದೀರ್ಘವಾದ ಸಂಶೋಧನೆಯ ನಂತರ ಅಭಿವೃದ್ಧಿ ಪಡಿಸಲಾಗಿದೆ. ಇಳುವರಿ ಹಾಗೂ ಫಸಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಕ್ಲೋರೈಡ್ ಅಂಶ ಕಡಿಮೆಯಿರುವ ಕಾರಣ ಬೆಳೆಗಳಿಗೆ ಸೂಕ್ತವಾಗಿದೆ. ನೀರಿನಲ್ಲಿ ಸಂಪೂರ್ಣ ಕರಗುವ ವಿಶೇಷ ಗುಣವಿರುವ ಗೊಬ್ಬರ ಉತ್ಕøಷ್ಟ ಗುಣಮಟ್ಟಹೊಂದಿದೆ. ಮಣ್ಣಿನ ಪಿಎಚ್ ಮೌಲ್ಯದ ಮೇಲೆ ಯಾವದೇ ಅಡ್ಡಪರಿಣಾಮವನ್ನು ಬೀರದೆ ಮಣ್ಣಿನ ನೈಸರ್ಗಿಕ ಗುಣಲಕ್ಷಣಗಳನ್ನು ಕಾಪಾಡುತ್ತದೆ ಎಂದು ಹೇಳಿದರು.
ಕಾಫಿ ಮಂಡಳಿ ಸದಸ್ಯ ಬೊಟ್ಟಂಗಡ ರಾಜು ಮಾತನಾಡಿ, ಇಸ್ರೇಲ್‍ನಲ್ಲಿ ಬಹಳ ಸಂಶೋಧನೆ ನಂತರ ಬೆಳೆಗಳಿಗೆ ಅಗತ್ಯವಿರುವ ಪ್ರಮಾಣದಷ್ಟೇ ಪೋಷಕಾಂಶಗಳನ್ನು ನೀಡಲಾಗುತ್ತದೆ. ಕಾಫಿ ಬೆಳೆಗಾರರು ಕೂಡ ನೂತನ ಆವಿಷ್ಕಾರ ಹಾಗೂ ಪೋಷಕಾಂಶಗಳ ನಿರ್ವಹಣೆಯನ್ನು ಕೈಗೊಂಡಲ್ಲಿ ಆರ್ಥಿಕವಾಗಿ ಸಧೃಢವಾಗಬಹುದು. ಮಣ್ಣು ಆರೋಗ್ಯ ಪ್ರಮಾಣ ಪತ್ರವನ್ನು ಎಲ್ಲಾ ಬೆಳೆಗಾರರು ಪಡೆದುಕೊಳ್ಳಬೇಕು ಎಂದು ಹೇಳಿದರು. ಮೊಜೆಕ್ ಇಂಡಿಯಾ ಸಂಸ್ಥೆಯ ಮಣ್ಣು ತಜ್ಞ ಶಶಿಕಾಂತ್ ಬೆಂಡಿ ಮಾತನಾಡಿದರು.
ಈ ಸಂದರ್ಭ ಕಾಫಿ ಮಂಡಳಿ ಸದಸ್ಯರು, ಗೊಬ್ಬರ ಮಾರಾಟಗಾರರು, ಬೆಳೆಗಾರರು ಪಾಲ್ಗೊಂಡಿದ್ದರು.