ಶ್ರೀಮಂಗಲ, ಜ. 31: ಪ್ರಸ್ತುತ ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯ ಪುಸ್ತಕದಲ್ಲಿರುವ ಶಿಕ್ಷಣವನ್ನು ಮಾತ್ರ ನೀಡಿ ಒಬ್ಬ ವಿದ್ಯಾವಂತನನ್ನು ಸಮಾಜಕ್ಕೆ ನೀಡುತ್ತಿದೆ. ಆದರೆ ಸಾಯಿ ಶಿಕ್ಷಣ ಸಂಸ್ಥೆ ಆಧ್ಯಾತ್ಮಿಕ ಜ್ಞಾನದೊಂದಿಗೆ ವ್ಯಾವಹಾರಿಕ ಜ್ಞಾನವನ್ನು ಅಭಿವೃದ್ಧಿ ಪಡಿಸಿ ಸಮಾಜಕ್ಕೆ ಉತ್ತಮ ನಾಗರಿ ಕರನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕರ್ ಹೇಳಿದರು.
ಪೊನ್ನಂಪೇಟೆ ಸಾಯಿ ಶಂಕರ್ ವಿದ್ಯಾಸಂಸ್ಥೆಯ ಜ್ಯೋತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕøತಿಯ ದ್ಯೋತಕವಾದ ಜ್ಯೋತಿಯನ್ನು ಪ್ರದಾನ ಮಾಡಿ ಮಾತನಾಡಿದರು. ಆಧ್ಯಾತ್ಮಿಕ ಹಾಗೂ ವಿಜ್ಞಾನಕ್ಕೆ ಅವಿನಾಭಾವ ಸಂಬಂಧ ವಿದ್ದು ಇದರ ಗೂಡಾರ್ಥವನ್ನು ಗುರುತಿಸಿ ಜೀವನವನ್ನು ನಡೆಸ ಬೇಕಾಗಿದೆ. ಪ್ರಸ್ತುತ ದೇಶದಲ್ಲಿ ಶೇ. 1 ರಷ್ಟು ಜನ ಶೇ. 70 ರಷ್ಟು ಸಂಪತ್ತÀನ್ನು ಅನುಭವಿಸುತಿದ್ದಾರೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು. ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ವಿದ್ಯಾರ್ಥಿ ಜೀವನ ಮಹತ್ವದ ಕ್ಷಣವಾಗಿದ್ದು ಈ ಸಂದರ್ಭದಲ್ಲಿ ಉತ್ತಮ ಜ್ಞಾನದೊಂದಿಗೆ ಮನುಷ್ಯತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ಪರರ ಕಷ್ಟದಲ್ಲಿ ಸ್ಪಂದನೆಯನ್ನು ನೀಡುವ ಗುಣವನ್ನು ಬೆಳೆಸಿಕೊಂಡು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಪೊನ್ನಂಪೇಟೆ ರಾಮಕೃಷ್ಣಾ ಶ್ರಮದ ನಿರ್ದೇಶಕ ಸ್ವಾಮಿ ಪರಹಿತನಂದ ಮಹಾರಾಜ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಗಾದವಾದ ಶಕ್ತಿ ತುಂಬಿದ್ದು ಮೌಲ್ಯಾಧಾರಿತ ಶಿಕ್ಷಣದ ಮುಖಾಂತರ ಇದನ್ನು ಹೊರ ಹಾಕುವ ಕೆಲಸಕ್ಕೆ ಮುಂದಾಗಬೇಕು. ಉನ್ನತ ಧ್ಯೇಯದೊಂದಿಗೆ ವಿದ್ಯಾರ್ಥಿಗಳು ಸಮಾಜಮುಖಿ ಕೆಲಸ ಹಾಗೂ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಬೀರೆಗೌಡ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ವಿದ್ಯಾಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಗ್ರೀಟ ಅಪ್ಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಕಳೆದ 17 ವರ್ಷದಿಂದ ನಿರಂತರವಾಗಿ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಇಂಚರ ಹಾಗೂ ಲೋಹಿತ್ ಇವರುಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.