ಮಡಿಕೇರಿ, ಜ. 31: ಪತ್ನಿಯನ್ನು ಹತ್ಯೆಗೈದ ಆರೋಪಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪೊನ್ನಂಪೇಟೆ ಬಳಿಯ ನಿಟ್ಟೂರು ಗ್ರಾಮದ ಮಲ್ಲೂರು ನಿವಾಸಿ, ಜೇನು ಕುರುಬರ ಕರಿಯ ಎಂಬತಾ 1.12.2015 ರಂದು ಪಾನಮತ್ತನಾಗಿ ತನ್ನ ಪತ್ನಿ ಜಯಮಾಲ ಎಂಬಾಕೆಯ ಕುತ್ತಿಗೆ ಹಿಸುಕಿ ನಂತರ ಮೈ ಮೇಲೆ ಸೀಮೆಣ್ಣೆ ಸುರಿದು ಬೆಂಕ ಹಚ್ಚಿ ಹತ್ಯೆಮಾಡಿದ್ದ. ಪೊನ್ನಂಪೇಟೆ ಪೊಲೀಸರು ಕರಿಯನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಪ್ರಭು ಅವರು ಆರೋಪಿ ಕರಿಯನಿಗೆ ಸಾದಾ ಜೀವಾವಧಿ ಶಿಕ್ಷೆ ಹಾಗೂ ರೂ. 10 ಸಾವಿರ ದಂಡ ವಿಧಿಸಿದ್ದು, ದಂಡ ತೆರದಿದ್ದಲ್ಲಿ ಆರು ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಹಾಂತಪ್ಪ ವಾದ ಮಂಡಿಸಿದರು.