ವೀರಾಜಪೇಟೆ, ಜ. 29: ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯ ಹೊರಡಿಸಿರುವ ಭೂ ಪರಿವರ್ತನಾ ಆದೇಶವನ್ನು ಹಿಂಪಡೆ ಯುವಂತೆ ಆಗ್ರಹಿಸಿ ವೀರಾಜಪೇಟೆ ಪ.ಪಂ. ಸದಸ್ಯರುಸರಕಾರದ ಬಳಿಗೆ ನಿಯೋಗ ತೆರಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ.ಪಂ. ಅಧ್ಯಕ್ಷ ಇ.ಸಿ.ಜೀವನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೀರಾಜಪೇಟೆ ಪಟ್ಟಣದಲ್ಲಿ ಭೂ ಪರಿವರ್ತನೆಯ ಸಮಸ್ಯೆಯಿಂದಾಗಿ ಭೂ ಮಾಲೀಕರಿಗೆ ಕಟ್ಟಡದ ಪರವಾನಗಿ ನೀಡುವದು ಸ್ಥಗಿತಗೊಳಿಸಲಾಗಿದೆ. ಪಟ್ಟಣದಲ್ಲಿ ಸುಮಾರು 400ಕ್ಕೂ ಅಧಿಕ ಅರ್ಜಿದಾರರು ಪರವಾನಗಿಗೆ ಕಾಯುತಿರುವದರಿಂದ ಸರಕಾರ ಕಟ್ಟಡ ಪರವಾನಗಿ ತಕ್ಷಣ ನೀಡುವಂತೆ ಹೊಸ ಆದೇಶ ಹೊರಡಿಸುವಂತೆ ಸಂಬಂಧಿಸಿದ ಸಚಿವರು, ಅಧಿಕಾರಿ ಗಳಿಗೆ ಮನವಿ ನೀಡಿ ಒತ್ತಾಯಿಸುವಂತೆ ನಿಯೋಗವು ಫೆ:6ರಂದು ಬೆಂಗಳೂರಿಗೆ ತೆರಳುವಂತೆ ಸಭೆ ತೀರ್ಮಾಸಿತು.

ಕಳೆದ 1957ರಲ್ಲಿಯೇ ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಜಾಗಗಳು ಭೂಪರಿವರ್ತನೆ ಗೊಂಡಿದೆ. ಪಟ್ಟಣದ ಸಮೀಪ ಕೃಷಿ ಭೂಮಿಗೆ ಮಾತ್ರ ಸರಕಾರದ ಈ ಹೊಸ ಆದೇಶ ಅನ್ವಯಿಸುತ್ತದೆ ಎಂದು ಎಸ್.ಎಚ್.ಮೊೈನುದ್ದೀನ್ ಸಭೆಗೆ ತಿಳಿಸಿ ಈ ಆದೇಶವನ್ನು ಒಮ್ಮತವಾಗಿ ತಿರಸ್ಕರಿಸುವಂತೆ ಹೇಳಿದಾಗ ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು.

ಪಟ್ಟಣ ಪಂಚಾಯಿತಿಗೆ ಸೇರಿದ ಅವಧಿ ಮುಗಿದ ಸುಮಾರು 35 ಅಂಗಡಿಗಳನ್ನು ಟೆಂಡರ್ ಮೂಲಕ ಹರಾಜು ಮಾಡಲು ಪಂಚಾಯಿತಿ ಕ್ರಮ ಕೈಗೊಂಡಿದೆ. ಆದರೆ ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಕುರಿತು ವಿವರವಾದ ಮಾಹಿತಿ ಇಲ್ಲ. ಇದನ್ನು ಆಕ್ಷೇಪಿಸುವದಾಗಿ ಸದಸ್ಯ ಮತೀನ್ ಸಭೆಗೆ ತಿಳಿಸಿದಾಗ ಒಬ್ಬ ವಿಕಲಚೇತನ ಸೇರಿದಂತೆ ಒಟ್ಟು 9 ಅಂಗಡಿಗಳನ್ನು ಮೀಸಲು ಇಡಲಾಗಿದೆ ಎಂದು ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದರು. ಮೀಸಲಾತಿಯಲ್ಲಿ ಅವರು ಒಪ್ಪುವ ಮಳಿಗೆಗಳನ್ನು ಕಾನೂನು ಬದ್ಧವಾಗಿ ನೀಡುವಂತೆ ಮತೀನ್ ಆಗ್ರಹಿಸಿದರು.

ಸದಸ್ಯೆ ಶೀಬಾ ಪೃಥ್ವಿನಾಥ್ ಮಾತನಾಡಿ ಕಟ್ಟಡ ಮಾಲೀಕರಿಗೆ ಕಟ್ಟಡ ನಿರ್ಮಾಣದ ಪರವಾನಗಿ ನೀಡದೆ ಒಂದು ವರ್ಷವಾಯಿತು. ಇದರಿಂದ ಹಳೇ ಮನೆ ಕೆಡವಿದವರು, ಮನೆ ದಳ ಹೊಂದಿದವರು ಕಂಗಾಲಾಗಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳದಿರುವದು ಭೂ ಮಾಲೀಕರಿಗೆ ತೊಂದರೆಯಾಗಿದೆ. ಅರ್ಜಿಗಳನ್ನು ಟೌನ್ ಪ್ಲಾನಿಂಗ್‍ಗೆ ಕಳಿಸದೆ ಪರವಾನಗಿಯನ್ನು ಪಟ್ಟಣ ಪಂಚಾಯಿತಿ ನೇರವಾಗಿ ಕೊಡುವಂತಾಗಬೇಕು ಎಂದರು.

ಸದಸ್ಯೆ ರತಿ ಬಿದ್ದಪ್ಪ ಮಾತನಾಡಿ ಗಾಂಧಿನಗರ ವಿಭಾಗಕ್ಕೆ ಪಟ್ಟಣ ಪಂಚಾಯಿತಿಯಿಂದ ಯಾವದೇ ಅಭಿವೃದ್ದಿ ಕಾಮಗಾರಿಗಳು ಆಗುತ್ತಿಲ್ಲ., ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿಲ್ಲ ಎಂದು ದೂರಿದರು. ವೀರಾಜಪೇಟೆ ಪಟ್ಟಣದಲ್ಲಿ ನಲ್ಲಿ ನೀರು ಪೂ ರೈಕೆಯ ಸಮಸ್ಯೆ ಉಂಟಾಗಿರುವದನ್ನು ಸರಿ ಪಡಿಸಿ ಎಲ್ಲರಿಗೂ ಸಮರ್ಪಕವಾಗಿ ನೀರು ಪೂರೈಸುವಂತೆ ಟಿ.ಜೆ.ಶಂಕರ್ ಶೆಟ್ಟಿ ಆಗ್ರಹಿಸಿದರು.

ಪಟ್ಟಣದಲ್ಲಿ ರಸ್ತೆ ಹಾಗೂ ವಿದ್ಯುತ್ ದೀಪಗಳ ದುರಸ್ತಿ, ನೈರ್ಮಲ್ಯ ಕಾಪಾಡುವದು. ಕುಡಿಯುವ ನಲ್ಲಿ ನೀರಿಗೆ ಆದ್ಯತೆ ನೀಡಿ ವಿಶೇಷ ಗಮನ ಹರಿಸುವಂತೆ ಸಭೆ ತೀರ್ಮಾನಿಸ ಲಾಯಿತು. ಚರ್ಚೆಯಲ್ಲಿ ಸಚಿನ್, ಪಟ್ಟಡ ರಂಜಿ, ಮಹಮ್ಮದ್ ರಾಫಿ, ರಾಜೇಶ್ ಮತ್ತಿತರರು ಭಾಗವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಸಹಾಯಕ ಅಭಿಯಂತರ ಎನ್.ಪಿ ಹೇಮ್ ಕುಮಾರ್, ಕಂದಾಯ ಅಧಿಕಾರಿ ವಿ.ಕೆ.ಸೋಮೇಶ್ ಉಪಸ್ಥಿತರಿದ್ದರು.