ಕುಶಾಲನಗರ, ಜ. 29: ಆಧುನಿಕ ಆಹಾರ ಪದ್ದತಿಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು ಆರೋಗ್ಯವೃದ್ಧಿಗೆ ಪೂರಕವಾದ ಸಿರಿಧಾನ್ಯಗಳ ಬಗ್ಗೆ ಅರಿತುಕೊಳ್ಳು ವದರೊಂದಿಗೆ ಹೆಚ್ಚಿನ ಬಳಕೆಗೆ ಮುಂದಾಗುವಂತೆ ಜಿಲ್ಲಾಪಂಚಾಯ್ತಿ ಸದಸ್ಯೆ ಕೆ.ಆರ್.ಮಂಜುಳಾ ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಸಂಯುಕ್ತಾಶ್ರಯದಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಿರಿ ಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಯುವಪೀಳಿಗೆ ಜಂಕ್ ಫುಡ್‍ಗಳಿಗೆ ಮಾರು ಹೋಗುತ್ತಿದ್ದಾರೆ. ಇದರೊಂದಿಗೆ ಶ್ರಮರಹಿತ ಜೀವನಶೈಲಿ ಕೂಡ ದೇಹದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತಿದೆ. ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳ ಬಳಕೆಯಿಂದಾಗಿ ಹೆಚ್ಚಿನ ಮಟ್ಟದಲ್ಲಿ ರೋಗನಿರೋಧಕ ಶಕ್ತಿ ಪಡೆದುಕೊಳ್ಳಲು ಸಾಧ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ಡಿವೈಎಸ್ಪಿ ಪಿ.ಕೆ.ಮುರಳೀಧರ್ ಮಾತನಾಡಿ, ಸಿರಿಧಾನ್ಯ ಬೆಳೆಗಳಿಗೆ ಇಲಾಖೆಯಿಂದ ಪ್ರೋತ್ಸಾಹದ ಅಗತ್ಯವಿದೆ. ಉತ್ತಮ ಆಹಾರ ಸೇವನೆ ಮೂಲಕ ಉತ್ತಮ ಆರೋಗ್ಯದೊಂದಿಗೆ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಸೋಮವಾರಪೇಟೆ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಆಭಿಮನ್ಯುಕುಮಾರ್, ಕುಶಾಲನಗರ ಸಾಮಾಜಿಕ ಕಾರ್ಯಕರ್ತ ಜಿ.ಎಲ್.ನಾಗರಾಜ್ ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಿದರು.

ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯೋಜನೆಯ ನಿರ್ದೇಶಕರುಗಳಾದ ಸೀತಾರಾಂ ಶೆಟ್ಟಿ, ಮನೋರಮಾ ಭಟ್, ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಬಲಂ ಭೋಜಣ್ಣ ರೆಡ್ಡಿ, ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ್, ಯೋಜನೆಯ ತಾಲೂಕು ಯೋಜನಾಧಿಕಾರಿ ವೈ.ಪ್ರಕಾಶ್ ಇದ್ದರು. ಗಿರಿಜಾ ಪ್ರಾರ್ಥಿಸಿ, ಹರೀಶ್ ಸ್ವಾಗತಿಸಿ, ಗೀತಾ ನಿರೂಪಿಸಿ, ಪ್ರಕಾಶ್ ವಂದಿಸಿದರು.

ಮೇಳದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ್ದ ವಿವಿಧ ಬಗೆಯ ಖಾದ್ಯಗಳು ಗಮನ ಸೆಳೆದವು. ಕುಶಾಲನಗರ, ಸೋಮವಾರಪೇಟೆ ಸೇರಿದಂತೆ ಪಿರಿಯಾಪಟ್ಟಣ ವ್ಯಾಪ್ತಿಯ ಸದಸ್ಯರು, ನಾಗರೀಕರು ಮೇಳದಲ್ಲಿ ಪಾಲ್ಗೊಂಡಿದ್ದರು.