ಮಡಿಕೇರಿ, ಜ. 29: ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಕುಷ್ಠರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನವು ತಾ. 30 ರಿಂದ ಫೆ. 13 ರವರೆಗೆ ನಡೆಯಲಿದ್ದು, ಈ ಬಗ್ಗೆ ಶಾಲಾ, ಕಾಲೇಜು, ಅಂಗನವಾಡಿ ಹಾಗೂ ಗ್ರಾ.ಪಂ.ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಸೂಚನೆ ನೀಡಿದ್ದಾರೆ. ನಗರದ ಜಿ.ಪಂ.ಸಿಇಓ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಷ್ಠರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಜಿ.ಪಂ.ಸಿಇಒ ಬಹಳ ಹಿಂದಿನಿಂದಲೂ ಕುಷ್ಠ ರೋಗವನ್ನು ಶಾಪವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕುಷ್ಠರೋಗವನ್ನು ಬಹುಔಷಧಿ ಚಿಕಿತ್ಸಾ ಪದ್ಧತಿಯಂತಹ ಚಿಕಿತ್ಸೆಯಿಂದ ಗುಣಪಡಿಸ ಬಹುದಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಅವರು ಸ್ಪರ್ಶ ಜ್ಞಾನವಿಲ್ಲದ ಚರ್ಮದ ಮೇಲಿನ ಮಚ್ಚೆ, ಶೀತ, ಉಷ್ಣ ಸ್ಪರ್ಶ ಅಥವಾ ನೋವಿನಿಂದ ಅರಿವು ಆಗದಿರುವ ದರಿಂದ ಕುಷ್ಠರೋಗ ಪತ್ತೆ ಹಚ್ಚಬಹುದಾಗಿದೆ ಎಂದು ಮಾಹಿತಿ ನೀಡಿದರು.

ಮಚ್ಚೆಗಳು ತಿಳಿಬಿಳಿ ಅಥವಾ ಕೆಂಪು ಇಲ್ಲವೇ ತಾಮ್ರ ವರ್ಣದ್ದಾಗಿದ್ದು, ಯಾವದೇ ಗಾತ್ರದಲ್ಲಿರಬಹುದು. ಕೆಲವೊಮ್ಮೆ ಉಬ್ಬಿದಂತೆಯೂ ಕಾಣಬಹುದು. ಇವುಗಳಲ್ಲಿ ಯಾವದೇ ಲಕ್ಷಣಗಳು ಕಂಡುಬಂದರೂ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೊಳಪಡಿಬೇಕು ಎಂದು ಸಲಹೆ ಮಾಡಿದರು.

ಕುಷ್ಠರೋಗ ನಿರ್ಮೂಲನೆ ಅಧಿಕಾರಿ ಡಾ.ಎಂ.ಶಿವಕುಮಾರ್ ಅವರು ಕುಷ್ಠ ರೋಗವು ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾದಿಂದ ಬರುವಂತಹ ದೀರ್ಘಕಾಲದ ಸೋಂಕು ಕಾಯಿಲೆ. ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆ ಈ ಕಾಯಿಲೆಯ ಗುಣಲಕ್ಷಣಗಳಾಗಿವೆ. ಈ ಕಾಯಿಲೆಯು ಮುಖ್ಯವಾಗಿ ನರ, ಚರ್ಮ ಮತ್ತು ಕಣ್ಣಿಗೆ ಬಾಧಿಸುತ್ತದೆ. ಈ ಕಾಯಿಲೆಯು ವ್ಯಕ್ತಿಯಿಂದ ವ್ಯಕ್ತಿಗೆ ಸಣ್ಣ ಹನಿಯಿಂದ ಮಾತನಾಡುವಾಗ, ಸೀನುವಾಗ ಬರುವ ಸಣ್ಣ ಹನಿಗಳು ಸೋಂಕು ಹರಡುತ್ತದೆ. ಇದು ವಂಶಪಾರಂಪರ್ಯವಾಗಿ ಹರಡುವಂತಹ ರೋಗವಲ್ಲ.

ರೋಗವನ್ನು ಬೇಗ ಪತ್ತೆ ಹಚ್ಚಿ, ಬಹು ಔಷಧ ಪದ್ಧತಿಯಿಂದ ಗುಣಪಡಿಸಬಹುದು. ಕುಷ್ಠರೋಗಕ್ಕೆ ಚಿಕಿತ್ಸೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಈ ರೋಗದಿಂದ ಬಳಲುವ ವ್ಯಕ್ತಿಯು ಎಲ್ಲರಂತೆ ಸಾಮಾನ್ಯ ಆರೋಗ್ಯವಂತ ಕೌಟುಂಬಿಕ ಜೀವನ ನಡೆಸಬಹುದು ಎಂದು ಡಾ. ಶಿವಕುಮಾರ್ ಅವರು ಹೇಳಿದರು. ಜಿ.ಪಂ. ಉಪಕಾರ್ಯದರ್ಶಿ ಸಿದ್ದಲಿಂಗಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಭಾಗ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ಮಂಜುನಾಥ್ ಇತರರು ಇದ್ದರು.