ಸೋಮವಾರಪೇಟೆ,ಜ.29: ರಾಷ್ಟ್ರಾಭಿಮಾನ ಮತ್ತು ದೇಶಭಕ್ತಿ ಇಲ್ಲದ ಶಿಕ್ಷಣ ವ್ಯರ್ಥ. ವಿದ್ಯಾರ್ಥಿ ದಿಸೆಯಲ್ಲಿಯೇ ಯುವ ಜನಾಂಗ ರಾಷ್ಟ್ರಾಭಿಮಾನವನ್ನು ಮೈಗೂಢಿಸಿ ಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ವಿಭಾಗ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಹೇಳಿದರು.

ಎಬಿವಿಪಿ ವತಿಯಿಂದ ಸೋಮವಾರಪೇಟೆ ಪಟ್ಟಣದ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ವಿವೇಕಾನಂದ ಜನ್ಮದಿನೋತ್ಸವ ನಿಮಿತ್ತದ ವಿವೇಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯುವ ಜನಾಂಗದಲ್ಲಿ ರಾಷ್ಟ್ರೀಯತೆಯ ಭಾವ ನೆಲೆಗೊಳ್ಳಬೇಕು. ದೇಶ ಮೊದಲು ಎಂಬ ಸಂಕಲ್ಪ ಮೂಡಬೇಕು. ಯುವ ಜನಾಂಗವೇ ದೇಶದ ಆಸ್ತಿಯಾಗಿದ್ದು, ಇದು ದೇಶಕಾರ್ಯಕ್ಕೆ ಸದ್ಬಳಕೆ ಯಾಗಬೇಕು. ಈ ನಿಟ್ಟಿನಲ್ಲಿ ವಿವೇಕಾನಂದರ ಜಾಗೃತಿ ವಾಣಿಗಳು ಇಂದಿಗೂ ಪ್ರಸ್ತುತವಾಗಿದ್ದು, ಎಲ್ಲಾ ಕಾಲೇಜಿನಲ್ಲೂ ಅವರ ತತ್ವಾದರ್ಶಗಳ ಸಂದೇಶ ಸಾರುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೈಜವಾನ್ ಮಾಜೀ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಜನಾಂಗದಲ್ಲಿ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಕೊರತೆ ಕಾಣುತ್ತಿದೆ. ವಿದ್ಯಾಭ್ಯಾಸದೊಂದಿಗೆ ದೇಶದ ಭವಿಷ್ಯದ ಬಗ್ಗೆಯೂ ಚಿಂತಿಸಬೇಕು ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಹನೀಯರ ಜಯಂತಿಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ ವಾಗುತ್ತಿದ್ದು, ಮಹಾನ್ ಚೇತನಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶಕ್ಕಾಗಿ ದುಡಿಯುವ ಮನೋಭಾವ ಮೂಡಿಸಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಭಾಷ್, ಎಬಿವಿಪಿ ನಗರ ಕಾರ್ಯದರ್ಶಿ ಮಹೇಶ್ ಉಪಸ್ಥಿತರಿದ್ದರು. ಎಬಿವಿಪಿ ಜಿಲ್ಲಾ ಸಂಚಾಲಕಿ ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನಾ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ವಿವೇಕಾನಂದ ಮತ್ತು ಸುಭಾಷ್‍ಚಂದ್ರ ಬೋಸ್ ಅವರುಗಳ ಭಾವಚಿತ್ರ ಸಹಿತ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.