ಮಡಿಕೇರಿ, ಜ. 29: ಕೊಡಗು ಜೆಡಿಎಸ್‍ನಲ್ಲಿ ಉಂಟಾಗಿರುವ ಮುಸುಕಿನ ಗುದ್ದಾಟವನ್ನು ಶಮನಗೊಳಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಅತೃಪ್ತರು ತೃಪ್ತರಾಗದೇ ಇದ್ದಲ್ಲಿ ಅವರಿಂದ ಜೆಡಿಎಸ್ ಪಕ್ಷಕ್ಕೆ ಯಾವದೇ ನಷ್ಟವಾಗದು ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯಾದ್ಯಂತ ಯುವ ಜನತೆ ಜೆಡಿಎಸ್ ಪರ ಒಲವು ತೋರುತ್ತಿದ್ದು, ಹೆಚ್.ಡಿ ಕುಮಾರಸ್ವಾಮಿಯವರ ನಾಯಕತ್ವ ಬೆಂಬಲಿಸಲು ಮುಂದಾಗುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಜನಪರ ಕಾಳಜಿಯನ್ನು ಬದಿಗಿಟ್ಟು ವೈಯಕ್ತಿಕ ನಿಂದನೆಯಲ್ಲಿ ತೊಡಗಿದ್ದು, ಜನತೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನ್ನು ಅಧಿಕಾರಕ್ಕೆ ತರಲು ಸಿದ್ಧರಾಗುತ್ತಿದ್ದಾರೆ. ಈಗಾಗಲೇ ಯುವ ಜೆಡಿಎಸ್ ‘ಮನೆ ಮನೆಗೆ ಕುಮಾರಣ್ಣ’ ಎಂಬ ಶೀರ್ಷಿಕೆಯಡಿ ಕುಮಾರಸ್ವಾಮಿ ಆಡಾಳಿತವಧಿಯ ಜನಪರ ಕಾರ್ಯಗಳನ್ನು ಜನತೆಗೆ ಮನದಟ್ಟು ಮಾಡುವ ಕೆಲಸ ಮಾಡುತ್ತಿದೆ ಎಂದ ಅವರು, ನೆಲ, ಜಲ ಉಳಿಸಲು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದರು.

ಕೊಡಗಿನಲ್ಲಿ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಸಮಸ್ಯೆ ಪರಿಹರಿಸುವಲ್ಲಿ ಇಲ್ಲಿನ ಶಾಸಕರು, ಸಂಸದರು ವಿಫಲರಾಗಿದ್ದಾರೆ. ಹಕ್ಕುಪತ್ರ ವಿತರಣೆ, ಕಾಡಾನೆ ಹಾವಳಿಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.

ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸರಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸದ್ಯದಲ್ಲಿಯೇ ಕೊಡಗಿಗೆ ಆಗಮಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ನಂತರ ಸರಕಾರದ ಮಟ್ಟದಲ್ಲಿ ಕೊಡಗಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕೆಲಸವನ್ನು ಶೀಘ್ರದಲ್ಲಿಯೇ ಮಾಡಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಜಾತಿ ಮತದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕಾರ್ಯವನ್ನು ಮಾಡುತ್ತಿದೆ ಎಂದು ದೂರಿದ ಅವರು, ಕರಾವಳಿಯಲ್ಲಿ ನಡೆದ ಗಲಭೆಗೆ ಬಿಜೆಪಿ ಕಾಂಗ್ರೆಸ್ ಪಕ್ಷಗಳೇ ಕಾರಣ ಎಂದು ಆರೋಪಿಸಿದರು. ಮುಂದಿನ ಚುನಾವಣೆಯಲ್ಲಿ ಜಾತ್ಯಾತೀತ ಪಕ್ಷವಾದ ಜೆಡಿಎಸ್‍ಗೆ ಜನ ಆಶೀರ್ವಾದ ಮಾಡಲಿದ್ದು, ಜನರ ಎಲ್ಲ ನಿರೀಕ್ಷೆಗಳನ್ನು ಜೆಡಿಎಸ್ ಕಾರ್ಯಗತಗೊಳಿಸಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಶೇಖರ್, ಮಾಜಿ ಸಚಿವ ಜೀವಿಜಯ, ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಾಜರಿದ್ದರು.