ಸಿದ್ದಾಪುರ, ಜ. 29 : ಕಳೆದ ಕೆಲವು ತಿಂಗಳ ಹಿಂದೆ ಗ್ರಾ.ಪಂ. ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಾ.ಪಂ. ಕಛೇರಿಯ ಸಮೀಪ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಶುದ್ದ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಯಿತು. ಆದರೆ ಕಳೆದ 1 ತಿಂಗಳಿನಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡದೇ ಗ್ರಾ.ಪಂ. ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಗ್ರಾಮಸ್ಥರು ಪಂಚಾಯಿತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀರಿನ ಘಟಕದ ಎದುರಿನಲ್ಲಿ ದುರಸ್ಥಿಯಾಗಿದೆ ಎಂಬ ನಾಮಫಲಕ ಅಳವಡಿಸಿ ತಿಂಗಳುಗಳೇ ಕಳೆದರೂ ದುರಸ್ಥಿಪಡಿಸುವ ಬಗ್ಗೆ ಆಸಕ್ತಿ ವಹಿಸದೆ ಜನಪ್ರತಿನಿಧಿಗಳು ರಾಜಕೀಯದಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾ.ಪಂ. ಕೂಡಲೇ ನೀರಿನ ಸೌಲಭ್ಯವನ್ನು ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.