ಸಿದ್ದಾಪುರ, ಜ. 28: ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರುಗಳ ಕೊರತೆಯಿಂದಾಗಿ ಸಮಸ್ಯೆಯಾಗಿದೆ. ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕನಿಷ್ಟ 6 ವೈದ್ಯರುಗಳು ಕರ್ತವ್ಯ ನಿರ್ವಹಿಸಬೇಕಾದ ಆಸ್ಪತ್ರೆಯಲ್ಲಿ ಕೇವಲ 2 ವೈದ್ಯರುಗಳು ಖಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ವೈದ್ಯರುಗಳ ಕೊರತೆಯಿಂದಾಗಿ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಸಿದ್ದಾಪುರ ವ್ಯಾಪ್ತಿಯಲ್ಲಿ ತೋಟ ಕಾರ್ಮಿಕರು ಸೇರಿದಂತೆ ಬಹುತೇಕ ಬಡ ವರ್ಗದ ಜನತೆ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿಕೊಂಡಿದ್ದಾರೆ. ಆದರೆ ಇರುವ 2 ವೈದ್ಯರುಗಳ ಪೈಕಿ ಓರ್ವ ವೈದ್ಯರು ದಿನಂಪ್ರತಿ ಕನಿಷ್ಟ 150 ರಿಂದ 200 ಮಂದಿಯಷ್ಟು ಹೊರ ರೋಗಿಗಳನ್ನು ತಪಾಸಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಬರುವ ಹೊರ ರೋಗಿಗಳಿಗೆ ವೈದ್ಯರ ಕೊರತೆಯಿಂದಾಗಿ ಚಿಕಿತ್ಸೆಗಾಗಿ ದೂರದ ಊರಿಗೆ ತೆರಳುವಂತಾಗಿದೆ. ಈ ಹಿಂದೆ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರುಗಳ ಕೊರತೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಆರೋಗ್ಯ ಕೇಂದ್ರದ ಎದುರು ಹಲವಾರು ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಕೂಡ ಜಿಲ್ಲಾಡಳಿತ ಹೆಚ್ಚಿನ ವೈದ್ಯರುಗಳನ್ನು ನೇಮಕ ಮಾಡದೇ ನಿರ್ಲಕ್ಷ್ಯ ವಹಿಸಿದೆ. ಕರ್ತವ್ಯದಲ್ಲಿರುವ ವೈದ್ಯರುಗಳು ಕೆಲವು ಬಾರಿ ಇಲಾಖೆಯ ಕೆಲಸ ಸಂಬಂಧ ಹೊರ ಊರಿಗೆ ತೆರಳುವ ಸಂದರ್ಭ ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಗಿದೆ. ಈ ಹಿನ್ನೆಲೆ ಸ್ತ್ರೀ ತಜ್ಞ ವೈದ್ಯರು ಸೇರಿದಂತೆ ಹೆಚ್ಚಿನ ವೈದ್ಯರುಗಳನ್ನು ಸರ್ಕಾರ ನೇಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಿದ್ದಾಪುರ ಸುತ್ತಮುತ್ತಲ ಪ್ರದೇಶವು ಕಾರ್ಮಿಕರು ಹಾಗೂ ಕಡುಬಡವರಿದ್ದು ಇವರುಗಳಿಗೆ ಇರುವಂತ ಏಕೈಕ ಸರ್ಕಾರಿ ಆಸ್ಪತ್ರೆ ಸಿದ್ದಾಪುರದಲ್ಲಿದ್ದು ಇಲ್ಲಿನ ಆಸ್ಪತ್ರೆಗೆ ಹೆಚ್ಚಿನ ವೈದ್ಯರುಗಳನ್ನು ನೇಮಕ ಮಾಡಬೇಕೆಂದು ಜಿಲ್ಲಾ ಜೆ.ಡಿ.ಎಸ್. ಪಕ್ಷದ ಅಧ್ಯಕ್ಷ ಸಂಕೇತ್ ಪೂವಯ್ಯ ಒತ್ತಾಯಿಸಿದ್ದಾರೆ. ಮುಂದಿನ 1 ತಿಂಗಳ ಒಳಗೆ ಹೆಚ್ಚಿನ ವೈದ್ಯರುಗಳನ್ನು ನೇಮಕ ಮಾಡದಿದ್ದಲ್ಲಿ ಜಿಲ್ಲಾ ಜೆ.ಡಿ.ಎಸ್ ವತಿಯಿಂದ ಸಿದ್ದಾಪುರ ಆರೋಗ್ಯ ಕೇಂದ್ರದ ಎದುರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಯ ಕಚೇರಿಯ ಎದುರು ಹೋರಾಟ ಮಾಡಲಾಗುವದೆಂದು ಎಚ್ಚರಿಕೆಯನ್ನು ನೀಡಿದ್ದಾರೆ.
- ವಾಸು