ಮಡಿಕೇರಿ, ಜ. 28: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ವತಿಯಿಂದ ಕೊಡಗಿನ ಎರಡು ಮಾದರಿ ತೋಟಗಳಿಗೆ ಭೇಟಿ ನೀಡಿ ಅವರು ಅನುಸರಿಸುತ್ತಿರುವ ಕಾಫಿ ಮತ್ತು ಕರಿಮೆಣಸು ಕೃಷಿ ಪದ್ಧತಿಯನ್ನು ಬೆಳೆಗಾರ ಸದಸ್ಯರಿಗೆ ತಿಳಿಸಿಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್‍ನ 35 ಸದಸ್ಯರು ಪಾಲ್ಗೊಂಡಿದ್ದರು.
ಪ್ರಥಮವಾಗಿ ಚೆಟ್ಟಳ್ಳಿಯ ಕೋಗಿಲಹಳ್ಳ ಎಸ್ಟೇಟ್‍ನ ಮಾಲೀಕ ಮನಿಯಪಂಡ ನಿತೀಶ್ ನಂಜಪ್ಪ ಅವರು ಅರೇಬಿಕಾ ಕಾಫಿ ಮತ್ತು ಕರಿಮೆಣಸು ಕೃಷಿಯಲ್ಲಿ ಅವರು ಅನುಸರಿಸಿರುವ ಕೃಷಿ ಪದ್ಧತಿ, ಕಳೆ ನಿರ್ವಹಣೆ, ಮರ ಕಪಾತು, ಕಾಫಿ ಗಿಡ ಕಪಾತು, ಸಸ್ಯ ಸಂರಕ್ಷಣೆ ಸ್ಪ್ರೇ, ಕಾಫಿ ಕುಯ್ಯುಲು, ಪಲ್ಪ್ ಮಾಡುವ ವಿಧಾನ ಮುಂತಾದವುಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಬಳಿಕ ಗೋಣಿಕೊಪ್ಪದ ಸಭೆ ಸೇರಿ ಕಾಫಿ ಕೃಷಿ ಪದ್ಧತಿಯಲ್ಲಿ ಸುಧಾರಣೆ ತರಲು ಈ ತೋಟ ಪ್ರೋಂಟೊ ಸಾಪ್ಟ್‍ವೇರ್ ಅಳವಡಿಕೆ ಕುರಿತು ಕಾರ್ಯಾಗಾರದಲ್ಲಿ ಭಾಗಿಯಾಗಿ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮವನ್ನು ಬೆಂಗಳೂರಿನ ಪ್ರೋಂಟೊ ಸಾಪ್ಟ್‍ವೇರ್ ಸೊಲ್ಯುಶನ್ ಕಂಪೆನಿಯ ರವಿ ಅನಂತನಾರಾಯಣ ನಡೆಸಿಕೊಟ್ಟರು.
ನಂತರ ಸದಸ್ಯರೆಲ್ಲಾ ಪೊನ್ನಂಪೇಟೆ ಹತ್ತಿರದ ಕೋಟೂರು ಪೊನ್ನಿಮಾಡ ಸುಬ್ರಮಣಿ ಅವರು ಸಜನ್ ಎಸ್ಟೇಟ್‍ಗೆ ಭೇಟಿ ನೀಡಿದರು. ಸುಬ್ರಮಣಿ ಅವರು ತಮ್ಮ ತೋಟಕ್ಕೆ ಬೇಕಾಗುವ ಗೊಬ್ಬರವನ್ನು ಸೆಗಣಿ ಮತ್ತು ತೆಂಗಿನ ನಾರನ್ನು (ಕಾಯರ್ ಪಿತ್) ಉಪಯೋಗಿಸಿ ಕಾಂಪೋಸ್ಟ್ ಮಾಡುವ ವಿಧಾನವನ್ನು ವಿವರಿಸಿದರು. ಕಾಂಪೋಸ್ಟ್ ಮಾಡುವಾಗ ಸೂಕ್ಷ್ಮಾಣುಗಳಾದ ಟ್ರೈಕೊಡರ್ಮ, ಸುಡೋಮನಾಸ್ಸ್, ಪಾಜಿಲೋಮೈಸಿಸ್ ಇತ್ಯಾದಿ ಜೀವಾಣುಗಳನ್ನು ಬಳಸಿಕೊಳ್ಳುವದನ್ನು ವಿವರಿಸಿದರು. ಇವರು ಬೇಸಿಗೆಯಲ್ಲೂ ಕರಿಮೆಣಸಿಗೆ ಡ್ರಿಪ್ ಇಲ್ಲವೇ ಪೈಪ್ ಇರಿಗೇಶನ್ ಮೂಲಕ ನೀರು ಹರಿಸುತ್ತಾರೆ. ಇದರಿಂದ ಕರಿಮೆಣಸಿನ ಇಳುವರಿ ಹೆಚ್ಚಾಗುತ್ತದೆ.
ಹಿರಿಯ ಬೆಳೆಗಾರ ಕೂತಂಡ ಉತ್ತಪ್ಪ, ಕಾಕಮಾಡ ಚಂಗಪ್ಪ, ಟಾಟಾ ಕಾಫಿ ಸಂಸ್ಥೆ, ಬಿ.ಬಿ.ಟಿ.ಸಿ. ಸಂಸ್ಥೆ ಮತ್ತು ಕೌಕೋಡಿ ಸಂಸ್ಥೆಗಳ ವ್ಯವಸ್ಥಾಪಕರು ಮತ್ತು ಅಸೋಸಿಯೇಷನ್‍ನ ಇತರ ಬೆಳೆಗಾರ ಸದಸ್ಯರು ಪಾಲ್ಗೊಂಡಿದ್ದರು. ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಬಿ.ಎಂ. ಬೋಪಯ್ಯ ಸ್ವಾಗತಿಸಿದರೆ, ಬಿ. ಅರುಣ್ ಅಪ್ಪಚ್ಚು ವಂದಿಸಿದರು.