ಮಡಿಕೇರಿ, ಜ. 28: ಭಾರತದಲ್ಲಿ ವಿದ್ಯಾವಂತರು ಹಾಗೂ ಧನವಂತರೇ ತಮ್ಮ ತಮ್ಮ ವೃತ್ತಿ ಧರ್ಮವನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿರುವ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ ಅವರು ಪ್ರತಿಯೊಬ್ಬರು ವೃತ್ತಿ ಧರ್ಮ ಪಾಲಿಸುವಂತೆ ಕರೆ ನೀಡಿದ್ದಾರೆ.

ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ತಾ. 26 ರಿಂದ ಸಂಗಮಗೊಂಡಿರುವ 2018- ರೋಟರಿ ಜಿಲ್ಲಾ ಸಮ್ಮೇಳನದ ದ್ವಿತೀಯ ದಿನದಂದು ಪಾಲ್ಗೊಂಡು ಮಾತನಾಡಿದ ಅವರು, ವಿದ್ಯೆ ಹಾಗೂ ಶ್ರೀಮಂತಿಕೆ ಮಂದಿ ವೃತ್ತಿ ಧರ್ಮ ಪಾಲಿಸದಿದ್ದರೆ ಸಾಮಾನ್ಯರಿಂದ ಏನನ್ನು ಅಪೇಕ್ಷಿಸಲು ಸಾಧ್ಯವೆಂಬ ಪ್ರಶ್ನೆ ಮುಂದಿಟ್ಟರು.

ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾಗುವವರಿಗೆ ನ್ಯಾಯದಾನ ನೀಡಬೇಕಾದವರು ಅಥವಾ ಆರೋಗ್ಯ ಸುಧಾರಣೆಗಾಗಿ ಶುಶ್ರೂಷೆಗೆ ಬರುವವರಿಗೆ ಸಂಕಷ್ಟದಿಂದ ಪಾರು ಮಾಡುವಲ್ಲಿ ವೃತ್ತಿಪರತೆ ತೋರಬೇಕೆಂದು ಒತ್ತಿ ಹೇಳಿದ ಅವರು, ಕೇವಲ ಹಣ ಗಳಿಕೆಗಾಗಿ ನಂಬಿ ಬರುವವರನ್ನು ಇನ್ನಷ್ಟು ಶೋಷಣೆ ಮಾಡುವಂತಾಗಬಾರ ದೆಂದು ಕಿವಿ ಮಾತು ಹೇಳಿದರು.

ಇಂತಹ ಮನೋಭಾವನೆ ಯಿಂದಾಗಿ ಬಹಳಷ್ಟು ಕುಟುಂಬಗಳು ಒಡೆಯುವದರೊಂದಿಗೆ ಗಂಡ - ಹೆಂಡತಿ ನಡುವೆ ಮನಸ್ತಾಪ ಹೆಚ್ಚಾಗಿ ವಿಚ್ಛೇದನಗಳಿಗೆ ಅವಕಾಶವಾಗುತ್ತಿದೆ ಎಂದು ಬೊಟ್ಟು ಮಾಡಿದ ಅವರು, ಇಲ್ಲಿ ವಿಘಟನೆ ಬದಲಿಗೆ ಒಗ್ಗೂಡಿಸುವ ಕೆಲಸವಾಗಬೇಕೆಂದು ತಿಳಿ ಹೇಳಿದರು.

ತಮ್ಮ ಭಾಷಣದಲ್ಲಿ ರಾಮಾಯಣದ ಪ್ರಸಂಗವನ್ನು ಸೂಚ್ಯವಾಗಿ ಉಲ್ಲೇಖಿಸಿದ ಅಶೋಕ್ ಅವರು, ರಾವಣ ಎಸಗಿದ ಅನ್ಯಾಯ ಖಂಡಿಸಿ ವಿಭೀಷಣ ಶ್ರೀರಾಮ ನೊಂದಿಗೆ ಧರ್ಮದ ಹಾದಿಯಲ್ಲಿ ಸಾಗಿದ್ದನ್ನು ಉದಾಹರಿಸಿದರು. ಅಂತೆಯೇ ಶ್ರೀ ರಾಮ ಕೂಡ ನಂಬಿ ಬಂದ

(ಮೊದಲ ಪುಟದಿಂದ) ವಿಭೀಷಣನನ್ನು ಸ್ವೀಕರಿಸಿ ಗೌರವಿಸಿದಂತೆ ಪ್ರತಿಯೊಬ್ಬರು ಸಮಾಜಮುಖಿ ಬದುಕು ನಡೆಸಬೇಕೆಂದರು.

ಸಂಚಾರ ನಿಯಮ : ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರು, ರಾಷ್ಟ್ರ ಹಾಗೂ ರಾಜ್ಯವೂ ಸೇರಿದಂತೆ ಕೊಡಗಿನಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ ಅಭಿಪ್ರಾಯ ಮಂಡಿಸುತ್ತಾ, ಪ್ರತಿಯೊಬ್ಬರು ಜೀವರಕ್ಷಣೆಗಾಗಿ ಸಂಚಾರ ನಿಯಮ ಪಾಲಿಸುವಂತೆ ಕಿವಿಮಾತು ಹೇಳಿದರು. ಸಂಚಾರ ನಿಯಮಗಳನ್ನು ನಿರ್ಲಕ್ಷಿಸಿ ವಾಹನಗಳನ್ನು ಚಾಲಿಸುವದರಿಂದ ಅಪಘಾತಗಳು ಹೆಚ್ಚುತ್ತಿವೆ ಎಂದು ಸಚಿತ್ರ ವರದಿ ನೀಡಿದ ಅವರು, ಬಹುತೇಕ ಕುಡುಕುತನ, ನಿರ್ಲಕ್ಷ್ಯ, ವಯೋಮಿತಿ ಬದ್ಧತೆಯಿಲ್ಲದೆ ಸಾವನ್ನು ತಂದುಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಕೂಡ ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿ ವರ್ಷದಿಂದ ವರ್ಷಕ್ಕೆ ಸಾವುಗಳು ಹೆಚ್ಚಿವೆ ಎಂದು ಬೊಟ್ಟು ಮಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಕ್ರಮವಾಗಿ ಅಪಘಾತದಿಂದ 67, 87, 115, 132ರಂತೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂಕಿ ಅಂಶ ನೀಡಿದರು.

ಫೀ.ಮಾ. ಗೆ ನಮನ: ಭಾರತದ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 119ನೇ ಜಯಂತಿ ಪ್ರಯುಕ್ತ ಇಂದು ರೋಟರಿ ಸಮ್ಮೇಳನದಲ್ಲಿ ಅತಿಥಿಗಳು ಕಾರ್ಯಪ್ಪ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಪಲ್ಸ್ ಪೋಲಿಯೋ : ಅಂತೆಯೇ ಅಂತರ್ರಾಷ್ಟ್ರೀಯ ಪೋಲಿಯೋ ನಿರ್ಮೂಲನಾ ದಿನ ಅಂಗವಾಗಿ, ಚಿಣ್ಣರಿಗೆ ಪೊಲೀಯೋ ಲಸಿಕೆ ನೀಡುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಕೈಗೊಳ್ಳಲಾಯಿತು. ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ, ಕಾರ್ಯದರ್ಶಿ ಎಂ. ಈಶ್ವರ್ ಭಟ್, ಮಂಗಳೂರಿನ ರೋ. ರೋಹಿನಾಥ, ರೋ.ನವೀನ್, ಲತಾ ಚಂಗಪ್ಪ, ಡಿ.ಎಂ. ಕಿರಣ್, ಮೋಹನ್ ಕರುಂಬಯ್ಯ ಸೇರಿದಂತೆ ರೋ. ಬರ್ಮನ್, ರೋ. ಪ್ರೊ. ಚಂಗ್ಲಿನ್ ಮೊದಲಾದವರು ಪಾಲ್ಗೊಂಡಿದ್ದರು. ದ್ವಿತೀಯ ದಿನದ ಕಾರ್ಯಕ್ರಮಕ್ಕೆ ಎಂ. ಈಶ್ವರ ಭಟ್ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು. ಮುಂದಿನ ಕಾರ್ಯ ಯೋಜನೆ ಹಾಗೂ ಸಂವಾದದೊಂದಿಗೆ ಸಮ್ಮೇಳನ ಸಮಾರೋಪಗೊಂಡಿತು.