ಮಡಿಕೇರಿ, ಜ. 28: ಕೊಡಗು ಜಿಲ್ಲೆಯಾದ್ಯಂತ ಇಂದು ಜರುಗಿದ ಮೊದಲನೇ ಸುತ್ತಿನ ಪಲ್ಸ್ ಪೋಲಿಯೋ ನಿರ್ಮೂಲನಾ ಲಸಿಕೆ ಕಾರ್ಯಕ್ರಮ ಶೇ. 98ರಷ್ಟು ಸಾಧನೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಖಚಿತಪಡಿಸಿದ್ದಾರೆ. ಜಿಲ್ಲೆಯೆಲ್ಲೆಡೆ ಇಂದು ಬೆಳಿಗ್ಗೆಯಿಂದ ಸಂಜೆಯ ತನಕ 5 ವರ್ಷದೊಳಗಿನ ಮಕ್ಕಳಿಗೆ ಈ ಪೋಲಿಯೋ ನಿರ್ಮೂಲನಾ ಲಸಿಕೆ ಹಾಕಲಾಯಿತು.ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 35971 ಮಕ್ಕಳ ಪೈಕಿ 35759 ಚಿಣ್ಣರಿಗೆ ಪೋಲಿಯೋ ಲಸಿಕೆಯೊಂದಿಗೆ ಶೇ. 99.4 ಸಾಧನೆಯಾಗಿದೆ. ನಗರ ಪ್ರದೇಶಗಳ 4656 ಶಿಶುಗಳಲ್ಲಿ 4094 ಮಕ್ಕಳಿಗೆ ಲಸಿಕೆ ಮೂಲಕ ಶೇ. 87.93 ಗುರಿ ತಲಪಲಾಗಿದೆ. ಅಲ್ಲದೆ ಸುಮಾರು 1500 ಪ್ರವಾಸಿ ಮಕ್ಕಳಿಗೂ ಇಂದು ಪೋಲಿಯೋ ನಿರ್ಮೂಲನಾ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿನಲ್ಲಿ 11320 ಮಕ್ಕಳ ಗುರಿಯೊಂದಿಗೆ 10483 ಮಕ್ಕಳಿಗೆ ಲಸಿಕೆ ನೀಡಿದ್ದು, ಶೇ.92.08 ಸಾಧನೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 13657 ಮಕ್ಕಳಲ್ಲಿ ಗುರಿಮೀರಿದ ಸಾಧನೆಯೊಂದಿಗೆ ಪ್ರವಾಸಿ ಮಕ್ಕಳ ಸಹಿತ 14017 ಶಿಶುಗಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಶೇ.102ರಷ್ಟು ಗುರಿ ತಲಪಿದೆ.

ಇನ್ನು ವೀರಾಜಪೇಟೆ ತಾಲೂಕಿನ 15650 ಮಕ್ಕಳ

(ಮೊದಲ ಪುಟದಿಂದ) ಪೈಕಿ 15353 ಶಿಶುಗಳೊಂದಿಗೆ ಶೇ.98.01 ಸಾಧನೆಯಾಗಿದೆ ಎಂದು ಇಲಾಖೆ ಅಧಿಕಾರಿಗಳು ‘ಶಕ್ತಿ’ಗೆ ಮಾಹಿತಿ ಒದಗಿಸಿದ್ದಾರೆ.

ಮಡಿಕೇರಿಯಲ್ಲಿ ಕಾರ್ಯಕ್ರಮಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ನಗರದ ಹಿಂದೂಸ್ಥಾನ್ ಶಾಲೆಯ ಬಳಿ ಅಂಗನವಾಡಿ ಕೇಂದ್ರದಲ್ಲಿ ಶಿಶುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.

ಐದು ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸುವಂತೆ ಅವರು ಕರೆ ನೀಡಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುರೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ನೀಲೇಶ್, ಡಾ.ಶಿವಕುಮಾರ್, ಡಾ.ಆನಂದ್ ಇತರರು ಇದ್ದರು.

ಸೋಮವಾರಪೇಟೆ

5 ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ಚಾಲನೆ ನೀಡಿದರು.

ಈ ಸಂದರ್ಭ ರೋಟರಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಪಟೇಲ್, ಕಾರ್ಯದರ್ಶಿ ಪ್ರಕಾಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಮಾಜೀ ಸೈನಿಕರ ಕಚೇರಿಯಲ್ಲಿ: ಇಲ್ಲಿನ ಜೈಜವಾನ್ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪೊಲೀಯೋ ಹನಿ ವಿತರಣಾ ಕಾರ್ಯಕ್ಕೆ ಸಂಘದ ಅಧ್ಯಕ್ಷ ಈರಪ್ಪ ಚಾಲನೆ ನೀಡಿದರು. ಈ ಸಂದರ್ಭ ಶುಶ್ರೂಷಕಿ ಬಿ.ವಿ. ಅನಿತಾ, ಅಂಗನವಾಡಿ ಕಾರ್ಯಕರ್ತೆ ಉಷಾ ಉಪಸ್ಥಿತರಿದ್ದರು.

ಗೋಣಿಕೊಪ್ಪ ವರದಿ : ವೀರಾಜಪೇಟೆ ತಾಲೂಕು ಮಟ್ಟದ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯ ಡಾ. ಶಿವಪ್ಪ ಚಾಲನೆ ನೀಡಿದರು. ಈ ಸಂದರ್ಭ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಸ್ಥಳೀಯ ಡಾ. ಚಂದ್ರಶೇಖರ್ ಹಾಗೂ ಡಾ. ಬೋಜಮ್ಮ ಉಪಸ್ಥಿತರಿದ್ದರು.

ಶನಿವಾರಸಂತೆ

ಆಲೂರುಸಿದ್ದಾಪುರ -ಶನಿವಾರಸಂತೆಯ ವಿವಿಧೆಡೆಯಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಾಯಿತು. ಶನಿವಾರಸಂತೆ ತ್ಯಾಗರಾಜ ಕಾಲೋನಿ, ಪಟ್ಟಣದ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆಯನ್ನು ಹಾಕಲಾಯಿತು. ಕಾರ್ಯಕ್ರಮದಲ್ಲಿ ಶನಿವಾರಸಂತೆ ಗ್ರಾ.ಪಂ.ಸದಸ್ಯ ಎಸ್.ಎನ್.ಪಾಂಡು ಮಗುವಿಗೆ ಪಲ್ಸ್ ಪೊಲಿಯೋ ಲಸಿಕೆಯನ್ನು ಹಾಕುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಆರೋಗ್ಯ ನಿರೀಕ್ಷಕ ವಿನಯ್, ಆಶಾ ಕಾರ್ಯಕರ್ತೆಯರಾದ ಸೌಭಾಗ್ಯಲಕ್ಷ್ಮಿ, ಎಸ್.ಪಿ. ಭಾಗ್ಯ ಹಾಜರಿದ್ದರು. ನಿಡ್ತ, ಮಾಲಂಬಿ, ಆಲೂರುಸಿದ್ದಾಪುರ ಮುಂತಾದ ಕಡೆಗಳಲ್ಲಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಾಯಿತು.

ವೀರಾಜಪೇಟೆ

ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಮೊದಲ ಹಂತದ ಪಲ್ಸ್ ಪೊಲೀಯೋಗೆ ಇಲ್ಲಿನ ರೋಟರಿ ಕ್ಲಬ್ ಅಧ್ಯಕ್ಷ ಶಾಂತಾರಾಂ ಕಾಮತ್ ಶಿಶುಗಳಿಗೆ ಲಸಿಕೆ ಹಾಕಿ ಚಾಲನೆ ನೀಡಿದರು. ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಆನಂದ್, ಸಿಬ್ಬಂದಿ ಹಾಜರಿದ್ದರು.

ವೀರಾಜಪೇಟೆ ಪಟ್ಟಣದ 11 ಬೂತ್‍ಗಳಲ್ಲಿ ಬೆಳಿಗ್ಗೆ 8ಗಂಟೆಯಿಂದ ಸಂಜೆ 5ಗಂಟೆಯವರೆಗೆ ಒಟ್ಟು 1311 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.