ಸೋಮವಾರಪೇಟೆ, ಜ. 28: ಕಳೆದ ತಾ. 20 ರಂದು ಸೋಮವಾರಪೇಟೆ ತಾ.ಪಂ. ಕಚೇರಿಯಲ್ಲಿ ಎನ್‍ಆರ್‍ಇಜಿ ಯೋಜನೆಯ ತಾಂತ್ರಿಕ ಸಹಾಯಕರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಪಂ. ಕಾರ್ಯನಿರ್ವಹಣಾಧಿಕಾರಿಯ ವಿರುದ್ಧ ಮೊಕದ್ದಮೆ ದಾಖಲಾಗಿದ್ದರೂ ಇದುವರೆಗೂ ಬಂಧಿಸಿಲ್ಲ ಎಂದು ಆರೋಪಿಸಿರುವ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು, ಇದನ್ನು ಖಂಡಿಸಿ ತಾ. 30 ರಂದು ಮಡಿಕೇರಿಯಲ್ಲಿ ನಡೆಯುವ ಕೆಡಿಪಿ ಸಭೆಗೆ ಮುತ್ತಿಗೆ ಹಾಕಲಾಗುವದು ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಟಿ.ಈ. ಸುರೇಶ್, ತಾ. 20 ರಂದು ತಾ.ಪಂ. ಕಚೇರಿಗೆ ಆಗಮಿಸಿದ ಜಿ.ಪಂ. ಕಾರ್ಯನಿರ್ವಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರ ಅವರು, ಕಚೇರಿಯಲ್ಲಿ ಕೆಲಸ ನಿರ್ವಹಿಸುವ ದಲಿತ ವರ್ಗದ ನೌಕರ ರಂಜಿತ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು.

ಹಲ್ಲೆ ಆರೋಪ ಎದುರಿಸುತ್ತಿರುವ ಸಿಇಓ ಅವರನ್ನು ತಕ್ಷಣ ಬಂಧಿಸಿ ಸೇವೆಯಿಂದ ಅಮಾನತು ಪಡಿಸಬೇಕು. ತಪ್ಪಿದಲ್ಲಿ ಕೆಡಿಪಿ ಸಭೆಗೆ ಜಿಲ್ಲಾದ್ಯಂತ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಮುತ್ತಿಗೆ ಹಾಕಲಾಗುವದು ಎಂದು ಎಚ್ಚರಿಸಿದರು.

ರಂಜಿತ್ ಅವರು ಬೆರಳಚ್ಚು ನಕಲು ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಲಾಗಿತ್ತು. ಇದಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳೇ ಸ್ಪಷ್ಟನೆ ನೀಡಿ ಯಾವದೇ ಕಾರಣಕ್ಕೂ ಬೆರಳಚ್ಚು ಮತ್ತು ಡಿಜಿಟಲ್ ಕೀ ನಕಲಿ ಆಗಿಲ್ಲ ಎಂದು ದೃಢೀಕರಣ ಕೊಟ್ಟಿದ್ದಾರೆ. ತಮ್ಮ ಹುದ್ದೆಯ ಹೆಸರನ್ನಿಡಿದು ಕರೆದ ಎಂಬ ಕಾರಣಕ್ಕೆ ನೌಕರನ ಮೇಲೆ ಹಲ್ಲೆ ನಡೆಸಿರುವ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ಗೋಷ್ಠಿಯಲ್ಲಿದ್ದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಗಿರೀಶ್, ಖಜಾಂಚಿ ಪ್ರತಾಪ್, ನಿರ್ದೇಶಕ ರಾಮಕೃಷ್ಣ ಅವರುಗಳು ಉಪಸ್ಥಿತರಿದ್ದರು.