ಸೋಮವಾರಪೇಟೆ, ಜ. 28: ರಾಷ್ಟ್ರ ನಿರ್ಮಾಣ ಕಾರ್ಯದತ್ತ ಯುವ ಜನಾಂಗ ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಅಭಿಪ್ರಾಯಿಸಿದರು.

ಸಮೀಪದ ನೇರುಗಳಲೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವತಿಯಿಂದ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೌಢಶಾಲಾ ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನೂತನ ಆವಿಷ್ಕಾರಗಳಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಜನ ಪಡೆಯಬೇಕು. ಪ್ರಾಕೃತಿಕ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಭೂಮಿ ಮಾನವನ ಆಸೆಗಳನ್ನು ಪೂರೈಸಲು ಶಕ್ತವಾಗಿದೆಯೇ ವಿನಃ ದುರಾಸೆಯನ್ನಲ್ಲ ಎಂಬದನ್ನು ಮನಗಾಣಬೇಕು ಎಂದು ಜೀವಿಜಯ ಕಿವಿಮಾತು ಹೇಳಿದರು.

ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಈ ಮಧ್ಯೆ ಕೆಲವರು ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡುತ್ತಿದ್ದು, ಈ ಹೇಳಿಕೆಯನ್ನು ವಿರೋಧಿಸುವವರನ್ನು ಕೆಟ್ಟ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಇಂತಹ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಎಂದರು.

ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ಮಕ್ಕಳು ಗುರು ಹಿರಿಯರಿಗೆ ಗೌರವ ನೀಡಬೇಕು ಎಂದು ಅಭಿಪ್ರಾಯಿಸಿದರಲ್ಲದೇ, ಇಂಗ್ಲೀಷ್ ವ್ಯಾಮೋಹದಿಂದಾಗಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿರುವದು ದುರಂತ. ಸರ್ಕಾರಿ ಶಾಲೆಗಳ ಉಳಿವಿಗೆ ಚಿಂತನೆ ನಡೆಸಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶನಿವಾರಸಂತೆ ವಿಘ್ನೇಶ್ವರ ಶಾಲೆಯ ಅಧ್ಯಾಪಕ ಜಯಕುಮಾರ್ ಮಾತನಾಡಿ, ಶಾಲೆಗಳಿಂದ ಸಮಾನತೆ ಉಳಿದಿವೆ. ಇಲ್ಲಿ ಎಲ್ಲರೂ ಸಮಾನರೇ ಆಗಿದ್ದಾರೆ. ದೇಶದ ಪವಿತ್ರ ಗ್ರಂಥ ಸಂವಿಧಾನವಾಗಿದ್ದು, ಅದಕ್ಕೆ ಬದ್ಧರಾಗಿ ಎಲ್ಲರೂ ಜೀವಿಸಬೇಕಿದೆ ಎಂದರು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮುಖ್ಯವಾಗಿದ್ದು, ಜವಾಬ್ದಾರಿ ಅರಿಯಬೇಕಿದೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ, ತಾ.ಪಂ. ಮಾಜೀ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಉಪಾಧ್ಯಕ್ಷ ದಿವಾಕರ್, ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಗ್ರಾ.ಪಂ. ಸದಸ್ಯೆ ಲೀಲಾವತಿ, ಸುಜಾತ ಚಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ದಶಮಾನೋತ್ಸವ ಅಂಗವಾಗಿ ಗ್ರಾಮಸ್ಥರಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.