ಮಡಿಕೇರಿ, ಜ. 27: ಪದವಿ ಕಾಲೇಜುಗಳಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವಂತಾಗ ಬೇಕು ಎಂದು ನ್ಯಾಕ್‍ನ ರಾಜ್ಯ ಸಂಯೋಜಕ ಸಿದ್ಧಲಿಂಗ ಸ್ವಾಮಿ ತಿಳಿಸಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವಿವಿದೋದ್ದೇಶ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಅಂಗೀಕೃತ ಪರಿಷತ್‍ನ (ನ್ಯಾಕ್) ಹೊಸ ಆಯಾಮಗಳು ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳನ್ನು ರೂಪಿಸುವದು ಪದವಿ ಶಿಕ್ಷಣ ಹಂತದಲ್ಲಿ ಬಹು ಮಹತ್ವದ್ದಾಗಿದ್ದು, ಆ ನಿಟ್ಟಿನಲ್ಲಿ ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವದು ಅಗತ್ಯ ಎಂದು ಹೇಳಿದರು.

ನ್ಯಾಕ್ ಸಮಿತಿಯ ಪ್ರೊ. ಶ್ರೀಧರ್ ಮಾತನಾಡಿ, ಕಾಲೇಜುಗಳ ಮೌಲ್ಯಮಾಪನ, ಶಿಕ್ಷಣದ ಗುಣಮಟ್ಟ ಇತ್ಯಾದಿಗಳ ಬಗ್ಗೆ ಗಮನಹರಿಸಬೇಕಿದೆ. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಅಂಗೀಕೃತ ಪರಿಷತ್ (ನ್ಯಾಕ್) ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, 1994 ರಲ್ಲಿ ಆರಂಭವಾಗಿದೆ.

ದೇಶಾದ್ಯಂತ ಎಲ್ಲಾ ಕಾಲೇಜಿನ ಗುಣಮಟ್ಟದ ಮಾನದಂಡ ನೀಡುವ ಸಂಸ್ಥೆಯಾಗಿದ್ದು, ಇಂದಿನ ಆಧುನಿಕ ಯುಗದಲ್ಲಿ ಅಂತರರಾಷ್ಟ್ರೀಯ ವಿದ್ಯಾ ಸಂಸ್ಥೆಯೊಂದಿಗೆ ಸ್ಪರ್ಧೆ ಮಾಡಬೇಕಾಗಿದೆ.

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಅಂಗೀಕೃತ ಪರಿಷತ್ (ನ್ಯಾಕ್) ಮೂಲಕ ಕಾಲೇಜಿನ ಗುಣಮಟ್ಟದ ಆಧಾರದ ಮೇಲೆ ಎ ಮತ್ತು ಬಿ ಶ್ರೇಣಿ ನೀಡುತ್ತಾರೆ. ಆಗ ಕಾಲೇಜಿನ ಮೌಲ್ಯವು ಹೆಚ್ಚುತ್ತದೆ ಹಾಗೆಯೇ ಸೌಲಭ್ಯವು ದೊರೆಯುತ್ತದೆ ಎಂದು ತಿಳಿಸಿದರು. ಉಪನ್ಯಾಸಕಿ ಅನುಪಮ ಮಾತನಾಡಿ, ಪದವಿ ಕಾಲೇಜಿನ ಗುಣಮಟ್ಟ ಹೆಚ್ಚಿಸುವದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವದು ಅತ್ಯಗತ್ಯವಾಗಿದೆ. ಜೊತೆಗೆ ವಿದ್ಯಾರ್ಥಿಗಳು ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕಿದೆ ಎಂದರು.

ಉಪನ್ಯಾಸಕರಾದ ಪಾಟ್ಕರ್ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಚಿತ್ರಾ, ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಎಂ.ಎನ್. ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಲೀಲಾ ಪಾಟ್ಕರ್, ಡಾ. ದಯಾನಂದ ಕೆ.ಸಿ. ಇತರರು ಇದ್ದರು.