ಕುಶಾಲನಗರ, ಜ. 27: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಡಾ. ಅಂಬೇಡ್ಕರ್ ಮತ್ತು ಮಾಜಿ ಪ್ರಧಾನಿ ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ವಸತಿ ರಹಿತರಿಗೆ ಮನೆ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ.

ಕುಶಾಲನಗರದ ಟೌನ್ ಕಾಲನಿ, ಅಂಬೇಡ್ಕರ್ ಕಾಲನಿ, ಕೈಗಾರಿಕಾ ಬಡಾವಣೆ ವ್ಯಾಪ್ತಿಯಲ್ಲಿ ಈ ಮನೆಗಳ ನಿರ್ಮಾಣ ಕಾಮಗಾರಿ ನಡೆಯು ತ್ತಿದ್ದು ಒಟ್ಟು 255 ಮನೆಗಳಲ್ಲಿ ಈಗಾಗಲೇ 68 ಮನೆಗಳು ಪೂರ್ಣಗೊಂಡು ಮನೆ ಮಾಲೀಕರ ವಶಕ್ಕೆ ನೀಡಲಾಗಿದೆ.

164 ಮನೆಗಳು ನಿರ್ಮಾಣ ಹಂತದಲ್ಲಿದ್ದು ಮಾರ್ಚ್ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮಾಹಿತಿ ನೀಡಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆ, ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ರೂ. 3.3 ಲಕ್ಷ, ಪಂಚಾಯಿತಿ ನಿಧಿಯಿಂದ ರೂ. 50 ಸಾವಿರ ಅನುದಾನ ಬಳಕೆಯಾಗುವದ ರೊಂದಿಗೆ ಒಟ್ಟು ರೂ. 3 ಲಕ್ಷದ 80 ಸಾವಿರ ವೆಚ್ಚದಲ್ಲಿ ವಸತಿ ಹೀನರಿಗೆ ಮನೆ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಕಳೆದ 1 ಶತಮಾನಗಳಿಂದ ನಿವೇಶನ ಹೊಂದಿ ಶಾಶ್ವತ ಸೂರು ಇಲ್ಲದ ಫಲಾನುಭವಿಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಗುರುತಿಸಿ ಈ ಮಹತ್ವದ ಯೋಜನೆ ಯಶಸ್ಸಿಗೆ ಕಾರಣ ಕರ್ತರಾಗಿದ್ದಾರೆ ಎಂದು ಶ್ರೀಧರ್ ‘ಶಕ್ತಿ’ಗೆ ತಿಳಿಸಿದ್ದಾರೆ.

23 ಅಡಿ ಹಾಗೂ 12 ಅಡಿ ಅಗಲ ವಿಸ್ತೀರ್ಣದಲ್ಲಿ ಈ ಮನೆಗಳನ್ನು ನಿರ್ಮಾಣ ಮಾಡ ಲಾಗಿದ್ದು, ಇದೀಗ ಕುಶಾಲನಗರದ ಕಾಳಮ್ಮ ಕಾಲನಿ, ವಿವೇಕಾನಂದ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲನಿಗಳಲ್ಲಿ ಕಡುಬಡವರು ತಮ್ಮ ಸ್ವಂತ ಮನೆಯ ಕನಸು ನನಸಾಗಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಕಳೆದ 3 ತಲೆಮಾರಿನಿಂದ ತಮಗೆ ಸ್ವಂತ ಮನೆಯಿಲ್ಲದೆ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದೆವು ಎಂದು ಸ್ಥಳಕ್ಕೆ ತೆರಳಿದ ‘ಶಕ್ತಿ’ ಪ್ರತಿನಿಧಿಯೊಂದಿಗೆ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡ ಅಂಬೇಡ್ಕರ್ ಕಾಲನಿಯ ಮಹಿಳೆ ಪುಟ್ಟಲಕ್ಷ್ಮಿ, ಇದೀಗ ತಮ್ಮ ಸ್ವಂತ ಮನೆ ಸಂತಸ ತಂದಿರುವದಾಗಿ ಹರ್ಷ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿಯಿಂದ ಕೇಂದ್ರ ಸರಕಾರದ ಯೋಜನೆಗಳನ್ನು ತಳಮಟ್ಟಕ್ಕೆ ತರುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವ ಬಗ್ಗೆ ತಮ್ಮ ಆಡಳಿತ ಮಂಡಳಿಗೆ ಸಮಾಧಾನ ತಂದಿದೆ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಹಾಗೂ ಸ್ಥಳೀಯ ವಾರ್ಡ್ ಸದಸ್ಯೆ ಹೆಚ್.ಕೆ. ಪಾರ್ವತಿ. ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವದು ಇವರ ಮನವಿಯಾಗಿದೆ.

ಕುಶಾಲನಗರದ ಗೌಡ ಸಮಾಜದ ರಸ್ತೆ ಬಳಿಯ ಕೈಗಾರಿಕಾ ಬಡಾವಣೆ ವ್ಯಾಪ್ತಿಯಲ್ಲಿ 24 ಮನೆಗಳು ಶೇ. 75 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಸಧ್ಯದಲ್ಲಿಯೇ ಕೆಲಸ ಪೂರ್ಣ ವಾಗಲಿದೆ ಎಂದು ವಾರ್ಡ್ ಸದಸ್ಯ ಮಧು ತಿಳಿಸಿದ್ದಾರೆ. ಕಾಮಗಾರಿ ನಡೆಯುವ ಸಂದರ್ಭ ಪ್ರತಿ ವಾರ್ಡ್ ಸದಸ್ಯರು ಆಗಿಂದಾಗೆ ಪರಿಶೀಲನೆ ನಡೆಸುವ ಮೂಲಕ ಗುಣಮಟ್ಟದ ಮನೆ ನಿರ್ಮಾಣವಾಗುವಲ್ಲಿ ಗಮನಹರಿಸಲಾಗುತ್ತಿದೆ ಎಂದು ಇನ್ನೋರ್ವ ಸದಸ್ಯ ಪ್ರಮೋದ್ ಮುತ್ತಪ್ಪ ಹೇಳಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇಂದ್ರಕ್ಕೆ ಮಂಜೂರಾದ 150 ಕ್ಕೂ ಅಧಿಕ ಮನೆಗಳನ್ನು ಜಿಲ್ಲಾಧಿಕಾರಿಗಳು ಕುಶಾಲನಗರಕ್ಕೆ ನೀಡುವಲ್ಲಿ ಸಂಪೂರ್ಣ ಸಹಕಾರ ನೀಡಿದ್ದು ಈ ಹಿಂದೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾಣೆಯಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಮುತುವರ್ಜಿಯಿಂದ ಈ ಯೋಜನೆ ಯಶಸ್ಸು ಕಂಡಿದೆ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್.

ಕುಶಾಲನಗರ ಪಟ್ಟಣ ಪಂಚಾಯಿತಿಯ ಈ ಯೋಜನೆ ಯಶಸ್ಸು ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆಗೆ ಈ ಸಾಲಿನ ಪ್ರಧಾನಮಂತ್ರಿ ಪುರಸ್ಕಾರ ಪ್ರಶಸ್ತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿರುವದಾಗಿ ಅವರು ಮಾಹಿತಿ ನೀಡಿದ್ದಾರೆ.

- ಚಂದ್ರಮೋಹನ್