ಮಡಿಕೇರಿ, ಜ. 27: ದೇಶದೆಲ್ಲೆಡೆ ಹುಲಿ ಸಂರಕ್ಷಿತ ಅಭಯಾರಣ್ಯಗಳಲ್ಲಿ ಹುಲಿಗಳ ಗಣತಿಯೊಂದಿಗೆ ಸಮೀಕ್ಷೆ ನಡೆಯುತ್ತಿದ್ದು, ಕೊಡಗು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಇತರೆಡೆಗಳಲ್ಲಿಯೂ ಈ ಸಂಬಂಧ ಸಮೀಕ್ಷೆ ನಡೆಸಲಾಗುತ್ತಿದೆ. ಕೊಡಗಿನ ನಾಗರಹೊಳೆ, ದುಬಾರೆ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಪ್ರತ್ಯೇಕ ತಂಡಗಳಲ್ಲಿ ಖಾಸಗಿ ಸಂಸ್ಥೆಯಿಂದ ಈ ಕಾರ್ಯ ನಡೆಯುತ್ತಿದೆ.ಕೊಡಗು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದಲ್ಲಿ ಈ ಹಿಂದಿನ ಸಮೀಕ್ಷೆಗಳಂತೆ ಸುಮಾರು 92 ಹುಲಿಗಳು ಇರುವದು ಖಾತರಿಯಾಗಿದ್ದು, ಅವುಗಳ ಸಂತತಿ ಹೆಚ್ಚಿರುವ ಬಗ್ಗೆ ಪ್ರಸಕ್ತ ಸಮೀಕ್ಷೆ ಬಳಿಕ ತಿಳಿಯಬೇಕಿದೆ ಎಂದು ಮೂಲಗಳು ಸುಳಿವು ನೀಡಿವೆ. ಇದೇ ತಾ. 8 ರಿಂದ 13ರ ತನಕ ಹುಲಿಗಳ ಗಣತಿ ಸಪ್ತಾಹ ದೇಶವ್ಯಾಪ್ತಿ ನಡೆದಿದ್ದು, ಜಿಲ್ಲೆಯಲ್ಲಿ ಈ ಕಾರ್ಯ ಇನ್ನೂ ಮುಂದುವರಿದಿದೆ.ಖಾಸಗಿ ಸಂಸ್ಥೆಯ ಗಿರೀಶ್ ಎಂಬವರೊಂದಿಗೆ ದುಬಾರೆಯ ಅರಣ್ಯ ರಕ್ಷಕರು, ಕಾವಾಡಿಗಳು ಸಹಿತ ಕೆಲವರು ಮಾವುತರು ಕೂಡ ಹುಲಿ ಗಣತಿಗೆ ತೆರಳಿದ್ದು, ಹೆಜ್ಜೆಗಳೊಂದಿಗೆ ಹುಲಿಯ ಹಿಕ್ಕಿ ಇತ್ಯಾದಿ ಲಭಿಸಿದರೂ, ವ್ಯಾಘ್ರ ಕಣ್ಣಿಗೆ ಬಿದ್ದಿಲ್ಲವೆಂದು ತಿಳಿದುಬಂದಿದೆ.ಮುಂದಿನ ದಿನಗಳಲ್ಲಿ ಹುಲಿ ಸಂಚಾರ ಮಾರ್ಗದಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅರಣ್ಯದ ಸೂಕ್ಷ್ಮ ತಾಣಗಳಲ್ಲಿ ಅಳವಡಿಸಿ ನಿಖರ ಮಾಹಿತಿ ಸಂಗ್ರಹಿಸಲಾಗುವದು ಎಂದು ಅಧಿಕೃತ ಮೂಲಗಳಿಂದ ‘ಶಕ್ತಿ’ಗೆ ಮಾಹಿತಿ ಲಭಿಸಿದೆ.