ಮಡಿಕೇರಿ, ಜ. 27: ಅಗ್ನಿಶಾಮಕದಳ ಕೊಡಗು ಜಿಲ್ಲಾ ಘಟಕ ವತಿಯಿಂದ ಗಾಳಿಬೀಡು ಗ್ರಾಮದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಅಗ್ನಿ ಅವಘಡ ಒಂದು ಅಣಕು ಕಾರ್ಯಾಚರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳ ಲಾಯಿತು. ಅಗ್ನಿಶಾಮಕ ದಳದ ಅಧಿಕಾರಿ ಚಂದನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸಿದಾಗ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬದನ್ನು ಅಣಕು ಕಾರ್ಯಾಚರಣೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಶಾಲೆಯಲ್ಲಿ ವಿವಿಧ ಸ್ವಯಂಸೇವಕ ಸಮಿತಿಗಳನ್ನು ರಚಿಸಲಾಗಿತು. ಅಲಾರಾಂ ಟೀಮ್, ಅವೇರನೆಸ್ ಟೀಮ್, ಪ್ರಥಮ ಚಿಕಿತ್ಸಾ ಟೀಮ್, ರೆಸ್ಕ್ಯೂ ಟೀಮ್ (ರಕ್ಷಣಾ ತಂಡ), ಸ್ಥಳಾಂತರಿಸುವ 7-8 ಗುಂಪುಗಳನ್ನು ರಚಿಸಿದ್ದರು. ಇವರಿಗೆಲ್ಲ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಾಗ ಯಾವ ರೀತಿ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸ ಬೇಕು ಎಂಬದರ ಬಗ್ಗೆ ತಿಳಿಸಿ ಕೊಡಲಾಯಿತು.

ಕಾರ್ಯಾಚರಣೆಯ ದಿನದಂದು ಅಗ್ನಿಶಾಮಕ ವಾಹನ ಹಾಗೂ ವೈದ್ಯಕೀಯ ತುರ್ತು ಚಿಕಿತ್ಸಾ ವಾಹನ(ಆಂಬುಲೆನ್ಸ್)ಗಳು ಹಾಜರಾಗಿತ್ತು. ಎಲ್ಲಾ ಪೂರ್ವ ತಯಾರಿಗಳೊಂದಿಗೆ ನಡೆದ, ಅಣಕು ಕಾರ್ಯಾಚರಣೆಯಲ್ಲಿ, ಅಗ್ನಿ ಅವಘಡಗಳು ಸಂಭವಿಸಿದಾಗ ಹೇಗೆ ಗಲಿಬಿಲಿಗೊಳ್ಳದೆ, ವ್ಯವಸ್ಥಿತವಾಗಿ ವರ್ತಿಸಿ ಅಪಾಯದಿಂದ ಪಾರಾಗಬೇಕು, ಕಡಿಮೆ ಹಾನಿ ಸಂಭವಿಸುವಂತೆ ನೋಡಿಕೊಳ್ಳುವದು ಹೇಗೆ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಚಂದನ್ ಅವರು ಮಕ್ಕಳಿಗೆ ನಿಜವಾದ ಅಗ್ನಿ ಅವಘಡ ಸಂಭವಿಸಿ ದಲ್ಲಿ ಹೇಗೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂಬದನ್ನು ವಿವರಿಸಿ ಹೇಳಿದರು. ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟ ನವೋದಯ ವಿದ್ಯಾಲಯದ ಪ್ರಾಚಾರ್ಯ ಪಿ. ಎಂ. ಐಸಾಕ್ ಮತ್ತು ಸಿಬ್ಬಂದಿ ವರ್ಗದವರಿಗೆ ಧನ್ಯವಾದ ಅರ್ಪಿಸಿದರು.