ವೀರಾಜಪೇಟೆ, ಜ. 26: ಪ್ರಜಾಪ್ರಭುತ್ವದಲ್ಲಿ ನಿಗದಿತ ವಯಸ್ಸಿನ ಅರ್ಹ ಮತದಾರರು ಮತದಾನ ದಿಂದ ಹೊರಗುಳಿಯದೆ ಮತದಾರರ ಪಟ್ಟಿಗೆ ಕಡ್ಡಾಯವಾಗಿ ಸೇರ್ಪಡೆಗೊಳ್ಳಬೇಕು. ಮತದಾನವು ಮೂಲ ಭೂತ ಹಕ್ಕುಗಳಲ್ಲಿ ಒಂದಾಗಿದ್ದು ಪ್ರತಿಯೊಬ್ಬರು ಮತದಾನದ ಹಕ್ಕನ್ನು ಚಲಾಯಿಸ ಬೇಕು ಎಂದು ಇಲ್ಲಿನ ಸಮುಚ್ಚಯ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಹೇಳಿದರು.

ಭಾರತ ಚುನಾವಣಾ ಆಯೋಗ, ವೀರಾಜಪೇಟೆ ತಾಲೂಕು ಆಡಳಿತ ಹಾಗೂ ಕಾನೂನು ಸೇವೆಗಳ ಸಮಿತಿಯಿಂದ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಮತದಾರರ ದಿನ”ವನ್ನು ಉದ್ಘಾಟಿಸಿದ ಜಯಪ್ರಕಾಶ್, ಪ್ರಜ್ಞಾವಂತ ಮತದಾರರಿಂದ ಮತಚಲಾವಣೆಯಾದರೆ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದರು.

ಸಭೆಯನ್ನುದ್ದೇಶಿಸಿ ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್, ಸರ್ಕಲ್ ಇನ್ಸ್‍ಪೆಕ್ಟ್‍ರ್ ಕುಮಾರ್ ಆರಾಧ್ಯ, ವಕೀಲ ಪವಾಜ್, ಪ್ರೊಬೆಷನರಿ ತಹಶೀಲ್ದಾರ್ ತ್ರಿನೇತ್ರ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜ್ ನೂತನವಾಗಿ ಸೇರ್ಪಡೆಗೊಂಡ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಇದೇ ಸಂದರ್ಭ ಮತದಾರರ ಪಟ್ಟಿಗೆ ನೂತನವಾಗಿ ಸೇರ್ಪಡೆಗೊಂಡ ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.

ಶಿರಸ್ತೇದಾರ್ ಕೆ.ಎಂ. ಚಿಣ್ಣಪ್ಪ, ಪ್ರವೀಣ್ ಕುಮಾರ್, ಮತದಾರರ ನೋಂದಣಿಯ ಉಸ್ತುವಾರಿ ಸಿಬ್ಬಂದಿ ಮಂಜುನಾಥ್ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.