ಕರಿಕೆ, ಜ. 26: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಶಾಲೆಗಳಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮ ದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸರಕಾರಿ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಅಕ್ಷರ ದಾಸೋಹ ಕೊಠಡಿಗಳು, ಶೌಚಾಲಯಗಳ ಕಾರ್ಯ ನಿರ್ವಹಣೆ ಪರಿಶೀಲನೆ ನಡೆಸಿ ನಂತರ ವಿದ್ಯಾರ್ಥಿಗಳೊಂದಿಗೆ ಕೆಲಹೊತ್ತು ಬೆರೆತು ಪರೀಕ್ಷಾ ಸಂದರ್ಭದಲ್ಲಿ ತರಾತುರಿಯಲ್ಲಿ ಅಭ್ಯಾಸ ನಡೆಸಿ ಆತಂಕದಿಂದ ಪರೀಕ್ಷೆ ಎದುರಿಸುವ ಬದಲು ಈಗಿನಿಂದಲೇ ಕಲಿಕೆಯತ್ತ ಗಮನಹರಿಸಿ ಶೇ. 100 ರಷ್ಟು ಫಲಿತಾಂಶಗಳಿಸಿ ಶಾಲೆಗೆ ಕೀರ್ತಿ ತರುವದಲ್ಲದೆ ಸಮಾಜದಲ್ಲಿ ಉನ್ನತ ಸ್ಥಾನಮಾನಗಳಿಸಿ ಸತ್ಪ್ರಜೆಗಳಾಗಿ ಬಾಳಬೇಕೆಂದು ಕಿವಿಮಾತು ಹೇಳಿದರು.

ಗರಂ ಆದ ಡಿ.ಸಿ.

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೆತ್ತುಕಾಯ ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿನ ಪುಟಾಣಿ ಮಕ್ಕಳನ್ನು ಅಕ್ಕರೆಯಿಂದ ಮಾತನಾಡಿಸಿ, ಅವರ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡಾಗ ಊಟದ ಕೋಣೆಯನ್ನು ವಿದ್ಯಾರ್ಥಿಗಳೇ ಸ್ವಚ್ಛಗೊಳಿಸುತ್ತಾರೆ ಎಂಬ ಅಂಶ ಬಹಿರಂಗಗೊಂಡಿತು. ಇದರಿಂದ ಕೆಂಡಾಮಂಡಲಗೊಂಡ ಡಿ.ಸಿ. ಅಲ್ಲಿದ್ದ ಅಡುಗೆ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ನಿಮ್ಮ ಮಕ್ಕಳನ್ನು ಹೀಗೆ ಕೆಲಸ ಮಾಡಿಸುತ್ತೀರಾ? ನೀವು ಕೇವಲ ಸಂಬಳ ಪಡೆಯಲು ಮಾತ್ರವೇ? ಕಿಂಚಿತ್ತಾದರೂ ಮಾನವೀಯತೆ ಇಲ್ಲವೇ? ಎಂದು ಹರಿಹಾಯ್ದರು. ಶಾಲೆಯಲ್ಲಿ ಇಪ್ಪತ್ತೊಂಬತ್ತು ವಿದ್ಯಾರ್ಥಿಗಳು ನೆಲೆಸಿದ್ದು ಓರ್ವ ಮೇಲ್ವಿಚಾರಕ ಹಾಗೂ ಎರಡುಜನ ಶಿಕ್ಷಕರಿದ್ದು ಮೇಲ್ವಿಚಾರಕರು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶನದಂತೆ ಪಾಲೆ ಜನಾಂ ಗದ ಸರ್ವೆಗೆ ತೆರಳಿ ದ್ದರು. ಆದರೆ ಓರ್ವ ಸ್ವಚ್ಛತಾ ಸಿಬ್ಬಂದಿ ನಾಮ ಕಾವಸ್ಥೆಗೆ ಮಾತ್ರ ಇರು ವಂತೆ ಕಂಡು ಬಂದಿತು. ಅಲ್ಲದೇ ಆ ಸಿಬ್ಬಂದಿ ರಜೆಯ ಮೇಲೆ ತೆರಳಿದ ಕಾರಣ ಮಕ್ಕಳೆ ಸ್ವಚ್ಛತಾ ಕಾರ್ಯನಿರ್ವಹಣೆ ಮಾಡುವ ಪರಿಸ್ಥಿತಿ ಕಂಡುಬಂದಿದ್ದು ಇದು ಪುನರಾವರ್ತನೆಯಾಗದಂತೆ ಸೂಚನೆ ನೀಡಿದರು. ನಂತರ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಸರಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದ್ದು ಬಡವರು ತಮ್ಮ ಮಕ್ಕಳನ್ನು ಉತ್ತಮ ವಾತಾವರಣವಿದೆ ಎಂದು ನಂಬಿ ಶಾಲೆಯಲ್ಲಿ ಬಿಡುತ್ತಿದ್ದು ಆದರೆ ಇಲ್ಲಿ ಮಕ್ಕಳು ಕಷ್ಟದ ಪರಿಸ್ಥಿತಿಯಲ್ಲಿರುವದು ದುರದೃಷ್ಟಕರವೆಂದರು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗುವದು ಹಾಗೂ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದರು.

ಶಾಲೆಯಲ್ಲಿ ನೀರಿನ ಸಮಸ್ಯೆ ಇದ್ದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೊರೆಯಿಸಿದ ಕೊಳವೆಬಾವಿ ಆರು ತಿಂಗಳು ಕಾರ್ಯನಿರ್ವಹಿಸಿಲ್ಲ. ಕಾಮಗಾರಿ ಕಳಪೆಯಾಗಿದೆ ಎಂದು ‘ಶಕ್ತಿ’ ಜಿಲ್ಲಾಧಿಕಾರಿ ಗಮನ ಸೆಳೆಯಿತು. ಈ ಸಂದರ್ಭ ತಹಶೀಲ್ದಾರ್ ಕುಸುಮ, ಕಂದಾಯ ಪರಿವೀಕ್ಷಕಿ ಶೀಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಸದಸ್ಯ ರಮಾನಾಥ, ಮಾಜಿ ಉಪಾಧ್ಯಕ್ಷ ಹೊದ್ದೆಟ್ಟಿ ಸುಧೀರ್ ಕುಮಾರ್, ಗ್ರಾಮ ಲೆಕ್ಕ ಅಧಿಕಾರಿ ಪ್ರಭಾಕರ್ ಹಾಜರಿದ್ದರು.

- ಹೊದ್ದೆಟ್ಟಿ ಸುಧೀರ್.