ಟಿ ನೀರು ಶೇ. 41 ಟಿ ಪರವಾನಗಿ ಶೇ. 77 ಮಡಿಕೇರಿ, ಜ. 26: ಮಡಿಕೇರಿ ನಗರಸಭೆಯಿಂದ ತೆರಿಗೆ ವಸೂಲಿ ಇತರ ಕೆಲಸ ಕಾರ್ಯಗಳ ನಿರ್ವಹಣೆಗೆ ಮುಖ್ಯ ಲೆಕ್ಕಾಧಿಕಾರಿ ಸೇರಿದಂತೆ ಪ್ರಮುಖ ಹುದ್ದೆಗಳು ಖಾಲಿಯಿವೆ.ಈ ನಡುವೆಯೂ ನಗರಸಭಾ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯು ಶೇ. 85 ರಷ್ಟು ಪ್ರಗತಿ ಕಂಡಿದೆ. ನಗರಸಭೆಯ ವಾರ್ಷಿಕ ಗುರಿ ರೂ. 193.29 ಲಕ್ಷ ವಸೂಲಿಯಾಗಬೇಕಿದ್ದು, ಪ್ರಸಕ್ತ ಡಿಸೆಂಬರ್ ಅಂತ್ಯಕ್ಕೆ ರೂ. 163.19 ಲಕ್ಷದಷ್ಟು ವಸೂಲಾಗಿದೆ. ಬಾಕಿ ರೂ. 30.10 ಲಕ್ಷದಷ್ಟಿದ್ದು, ಶೇ. 85 ರಷ್ಟು ಸಾಧನೆಯಾಗಿದೆ ಎಂದು ನಗರಸಭಾ ಆಯುಕ್ತೆ ಶುಭ ತಿಳಿಸಿದ್ದಾರೆ.
ಇನ್ನು ನಗರಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಹೊಟೇಲ್ ಉದ್ದಿಮೆಗಳು, ಹೋಂಸ್ಟೇಗಳನ್ನು ಮನೆ ಮನೆಗಳಲ್ಲಿ ಬಹುಮಂದಿ ನಡೆಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕುಂಡಾ ಮೇಸ್ತ್ರಿ ಯೋಜನೆಯ ಫಲವಾಗಿ ನೀರು ಪೂರೈಕೆಯೂ ಕೊರತೆಯಿಲ್ಲದೆ ಸರಬರಾಜುಗೊಳ್ಳುತ್ತಿದೆ. ಆದರೆ ನೀರಿನ ಕಂದಾಯ ಪಾವತಿ ಮಾತ್ರ ಸಾರ್ವಜನಿಕರಿಂದ ಹಿನ್ನೆಡೆ ಕಂಡು ಬಂದಿದೆ ಎಂದು ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಾಬ್ತು 109.59 ಲಕ್ಷ ವಸೂಲಿಯಾಗಬೇಕಿದ್ದು, ಪ್ರಸಕ್ತ 45-46 ಲಕ್ಷ ಮಾತ್ರ ಸಂಗ್ರಹವಾಗಿದೆ. ಇಲ್ಲಿ ಸಂಗ್ರಹಕ್ಕಿಂತ ಬಾಕಿ ವಸೂಲಿ ಹೆಚ್ಚಾಗಿದ್ದು, ರೂ. 64.13 ಲಕ್ಷದಷ್ಟು ಇದೆ. ಪ್ರಗತಿ ಕೇವಲ 41.50 ಮಾತ್ರ ಶೇಕಡ ಸಂದಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.(ಮೊದಲ ಪುಟದಿಂದ) ಇದರೊಂದಿಗೆ ನಗರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವ್ಯಾಪಾರೋದ್ಯಮಗಳ ತೆರಿಗೆ ವಸೂಲಿ ರೂ. 18.97 ಲಕ್ಷವಿದ್ದು, ಪ್ರಸಕ್ತ 14.66 ಲಕ್ಷ ಸಂಗ್ರಹದೊಂದಿಗೆ 4.31 ಲಕ್ಷ ಬಾಕಿಯಿದ್ದು, ಶೇ. 77.28 ಸಾಧನೆ ಕಂಡು ಬಂದಿದೆ ಎಂದು ಅಂಕಿಅಂಶ ನೀಡಿದ್ದಾರೆ.
ಅತ್ತ ನಗರಸಭೆಯ ಸ್ವಂತ ಮಳಿಗೆಗಳು ಮತ್ತು ಕಟ್ಟಡಗಳಿಂದ ಬಾಡಿಗೆಯಲ್ಲಿ ರೂ. 98 ಲಕ್ಷ ವಸೂಲಿಯಾಗಬೇಕಿದ್ದು, ಈಗಾಗಲೇ 73.22 ಲಕ್ಷ ಸಂಗ್ರಹದೊಂದಿಗೆ 24.78 ಲಕ್ಷ ಇನ್ನು ವಸೂಲಿಯಾಗಬೇಕಿದೆ. ಈ ಬಾಬ್ತು ಶೇಕಡ 74 ರಷ್ಟು ಪ್ರಗತಿ ಕಂಡುಬಂದಿದೆ ಎಂದು ವಿವರಿಸಿದರು.
ಮಾತ್ರವಲ್ಲದೆ ನಗರಸಭಾ ವ್ಯಾಪ್ತಿಯಲ್ಲಿ ಕಾನೂನಿನ ಅಡಿಯಲ್ಲಿ ಪ್ರಚುರ ಪಡಿಸಿರುವ ಜಾಹೀರಾತು ಫಲಕಗಳಿಂದ ಒಟ್ಟು ರೂ. 4.19 ಲಕ್ಷ ಸಂಗ್ರಹವಾಗಬೇಕಿದ್ದು, ಈ ಬಾಬ್ತು ರೂ. 3.53 ಲಕ್ಷ ವಸೂಲಿಯಾಗಿದೆ. ಬಾಕಿ ರೂ. 66 ಸಾವಿರ ಮಾತ್ರ ಬರಬೇಕಿದ್ದು, ಒಟ್ಟು ಶೇ. 78.50 ರಷ್ಟು ಸಾಧನೆಯಾಗಿದೆ.
ಹೊಂದಾಣಿಕೆ ಕೊರತೆ: ಹಾಲೀ ನಗರಸಭಾ ಆಯುಕ್ತರು ಮತ್ತು ಅಧ್ಯಕ್ಷರ ನಡುವೆ ಹೊಂದಾಣಿಕೆಯ ಕೊರತೆ, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೂ ‘ಕುರ್ಚಿ’ ಸಂಬಂಧ ಮುನಿಸಿಕೊಂಡಿರುವದು, ಆಡಳಿತ ಸದಸ್ಯರೊಳಗಿನ ಒಡಕುಗಳ ನಡುವೆ ದೈನಂದಿನ ಕೆಲಸ ಕಾರ್ಯಗಳು ನಡೆಯುತ್ತಿದೆಯಾದರೂ, ನಗರಸಭೆಯ ಕಾರ್ಯಗಳ ಪ್ರಗತಿಯಲ್ಲಿ ಹಿನ್ನೆಡೆ ಗೋಚರಿಸತೊಡಗಿದೆ.
ಆರು ತಿಂಗಳು, ವರ್ಷದ ಹಿಂದೆ ನಿರ್ಮಿಸಿರುವ ರಸ್ತೆಗಳನ್ನು ಅಲ್ಲಲ್ಲಿ ಅಗೆದು ಒಳಚರಂಡಿ ಇತ್ಯಾದಿ ಅವೈಜ್ಞಾನಿಕ ಕೆಲಸಗಳಿಂದ ಜನತೆ ಬವಣೆ ಪಡುತ್ತಿದ್ದರೂ, ಆಡಳಿತಾರೂಢರು ಮೌನಕ್ಕೆ ಶರಣಾಗಿರುವದು ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂಬ ಅಸಮಾಧಾನ ಪ್ರತಿಧ್ವನಿಸತೊಡಗಿದೆ. -ಶ್ರೀಸುತ