ಮಡಿಕೇರಿ, ಜ. 26: ಬೆಂಗಳೂರಿನ ಚಿನ್ನಾಭರಣ ಮಳಿಗೆಯ ಉದ್ಯೋಗಿಯೊಬ್ಬರನ್ನು ಕೊಡಗಿನ ಗಡಿಭಾಗದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು, ನಗದು ದೋಚಿರುವ ದುಷ್ಕøತ್ಯಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಠಾಣಾ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದು, ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ.
ಶನಿವಾರಸಂತೆ ಸಮೀಪದ ಚಂಗಡಳ್ಳಿ ಬಳಿಯ ನಾಗನಹಳ್ಳಿಯಲ್ಲಿ ಅವಿತುಕೊಂಡಿದ್ದ ದಿಲೀಪ್ ಯಾನೆ ಅಜಯ್ ಹಾಗೂ ಭರತ್ ಎಂಬಿಬ್ಬರನ್ನು ಬಂಧಿಸಿ ಸಕಲೇಶಪುರ ನ್ಯಾಯಾಲಯಕ್ಕೆ ಹಾಜರು ಪಡಿಸುವರೊಂದಿಗೆ ಆರೋಪಿಗಳನ್ನು 15 ದಿನಗಳ ತನಕ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
(ಮೊದಲ ಪುಟದಿಂದ) ತಾ. 22 ರಂದು ಸಂಜೆ ಐದು ಗಂಟೆಯ ಸುಮಾರಿಗೆ ಯಸಳೂರು ಬಳಿಯ ಮತ್ತೂರು ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಆರೋಪಿಗಳು, ಬೆಂಗಳೂರಿನ ಜಿ.ಎಸ್. ಗೋಲ್ಸ್ ಲೋನ್ ಕಂಪೆನಿಯ ಯೋಗೇಶ ಬಾಬು ಎಂಬವರಿಗೆ ಆರಮಿಷವೊಡ್ಡಿ ಕರೆಸಿಕೊಂಡಿದ್ದಾರೆ.
ಆ ಮೇರೆಗೆ ಆರೋಪಿಗಳಿಂದ ಚಿನ್ನ ಖರೀದಿಸಲು ತಯಾರಿಯೊಂದಿಗೆ ನಗದು ರೂ. 1.40 ಲಕ್ಷ ಮೊತ್ತದೊಂದಿಗೆ ಯೋಗೇಸ ಬಾಬು ಬಂದಿದ್ದು, ಈ ವೇಳೆ ಮೂವರು ಆರೋಪಿಗಳಾದ ಭರತ್, ಅಜಯ್ ಯಾನೆ ದಿಲೀಪ್ ಹಾಗೂ ಪಮ್ಮಿ ಅಲಿಯಾಸ್ ಸಂತೋಷ್ ಸೇರಿ ಮುಖಕ್ಕೆ ಖಾರದ ಪುಡಿ ಎರಚಿ ಚಾಕು ತೋರಿಸಿ ಕೊಲೆ ಬೆದರಿಕೆವೊಡ್ಡುವ ಮೂಲಕ ನಗದು ರೂ. ಒಂದು ಲಕ್ಷದ ನಲವತ್ತು ಸಾವಿರ ದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಯೋಗೇಶಬಾಬು ನೀಡಿದ ಪುಕಾರಿನ ಮೇರೆಗೆ ಸಕಲೇಶಪುರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸುವ ಮೂಲಕ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ ದುಷ್ಕøತ್ಯಕ್ಕೆ ಬಳಸಿದ ಮಾರಕಾಸ್ತ್ರ ಮತ್ತು ದ್ವಿಚಕ್ರ ವಾಹನ ಸಹಿತ ನಗದು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಪಮ್ಮಿ ಯಾನೆ ಸಂತೋಷ್ ಪರಾರಿಯಾಗಿದ್ದಾನೆ.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಹೆಚ್ಚುವರಿ ಅಧೀಕ್ಷಕ ಜ್ಯೋತಿ ವೈದ್ಯನಾಥ್, ಉಪ ಅಧೀಕ್ಷಕ ಜಗದೀಶ್ ಮಾರ್ಗದರ್ಶನದಲ್ಲಿ ಸಕಲೇಶಪುರ ವೃತ್ತ ನಿರೀಕ್ಷಕ ವೆಂಕಟೇಶ್ ತಂಡ ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿಗಳಾದ ಶಶಿಕುಮಾರ್, ರಂಗಸ್ವಾಮಿ, ಕೀರ್ತಿಕುಮಾರ್, ಕಾಂತರಾಜು ಕೃತ್ಯ ಭೇದಿಸುವಲ್ಲಿ ಪಾಲ್ಗೊಂಡಿದ್ದಾರೆ.