ಮಡಿಕೇರಿ, ಜ. 26: ಗಣರಾಜ್ಯೋತ್ಸವ ಮುನ್ನ ದಿನವಾದ ತಾ. 25ರಂದು (ನಿನ್ನೆ) ಕರ್ನಾಟಕ ಸರಕಾರದ ಪೊಲೀಸ್ ಇಲಾಖೆಯಿಂದ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ಸಹಿತ ಇತರೆಡೆಯ ಮುಖ್ಯಸ್ಥರಿಗೆ ತುರ್ತು ನೆನಪೋಲೆಯೊಂದಿಗೆ, ಕೋಮುಗಲಭೆಗಳಿಗೆ ಸಂಬಂಧಿಸಿ ದಂತೆ ಅಲ್ಪಸಂಖ್ಯಾತರ ಮೇಲೆ ದಾಖಲಾಗಿರುವ ಮೊಕದ್ದಮೆ ಗಳನ್ನು ಹಿಂಪಡೆಯುವ ದಿಸೆಯಲ್ಲಿ ಸ್ಪಷ್ಟ ಅಭಿಪ್ರಾಯ ದೊಂದಿಗೆ ವರದಿ ಸಲ್ಲಿಸಲು ಆದೇಶಿಸಲಾಗಿದೆ.

ಈ ಬಗ್ಗೆ ಕರ್ನಾಟಕ ಪೊಲೀಸ್ ಇಲಾಖೆಯ ಡೈರೆಕ್ಟರ್ ಜನರಲ್ ಮತ್ತು ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್ ಕಚೇರಿಯ ಎಐಜಿಪಿ ಶಿವಪ್ರಕಾಶ್ ದೇವರಾಜ್ ಅವರು ಪೊಲೀಸ್ ಅಧೀಕ್ಷಕರುಗಳಿಗೆ ಅತ್ಯಂತ ತುರ್ತು ನೆನಪೋಲೆ ರವಾನಿಸಿದ್ದು, ಈಗಾಗಲೇ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿರುವ ದೋಷಾರೋಪಣಾ ಪ್ರಕರಣಗಳ ವಿವರವುಳ್ಳ ದ್ವಿಪ್ರತಿಗಳನ್ನು ಕೂಡಲೇ ಕೇಂದ್ರ ಕಚೇರಿಗೆ ಕಳುಹಿಸಿಕೊಡುವಂತೆ ನಿರ್ದೇಶಿಸಿದ್ದಾರೆ.

ಆ ಪ್ರಕಾರ ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ (2013-2017) ಘಟಿಸಿರುವ ಕೋಮುಗಲಭೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ

(ಮೊದಲ ಪುಟದಿಂದ) (ನ್ಯಾಯಾಲಯ) ಹಿಂಪಡೆಯುವ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ನೀಡುವಂತೆ ಕೋರಲಾಗಿದ್ದು, ವಿವರ ದಾಖಲಾತಿಗಳನ್ನು ಈ ಕೂಡಲೇ ಒದಗಿಸಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾವಿ ಹಾಗೂ ಮಂಗಳೂರು ಆಯುಕ್ತರ ಸಹಿತ ಕೊಡಗು ಜಿಲ್ಲೆಯ ಪೊಲೀಸ್ ಅಧೀಕ್ಷಕರೊಂದಿಗೆ ತುಮಕೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಕೆ.ಜಿ.ಎಫ್., ಮೈಸೂರು, ಹಾಸನ, ಚಾಮರಾಜನಗರ, ಬೆಳಗಾವಿ ಗ್ರಾಮಾಂತರ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕಾರವಾರ, ಚಿಕ್ಕಮಗಳೂರು, ಉಡುಪಿ, ಬಳ್ಳಾರಿ, ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಗಳಿಂದಲೂ ತಕ್ಷಣ ವರದಿಗೆ ನಿರ್ದೇಶಿಸಲಾಗಿದೆ.