ಮಡಿಕೇರಿ, ಜ. 26: ಭಾರತದ 69ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಈ ಸನ್ನಿವೇಶದಲ್ಲಿ ದೇಶಕ್ಕಾಗಿ ಅರ್ಪಣಾ ಮನೋಭಾವದಿಂದ ಶ್ರಮಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಹಿತ ಎಲ್ಲ ಮಹನೀಯರ ಜೀವನಗಾಥೆ ಸ್ಫೂರ್ತಿಯೊಂದಿಗೆ ಮೇಲ್ಪಂಕ್ತಿಯಾಗಿದೆ ಎಂದು ರಾಜ್ಯ ಯೋಜನಾ, ಸಾಂಖ್ಯಿಕ, ವಿಜ್ಞಾನ - ತಂತ್ರಜ್ಞಾನ ಖಾತೆ ಹೊಂದಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ನೆನಪಿಸಿದ್ದಾರೆ.

ಇಂದು ಗಣರಾಜ್ಯೋತ್ಸವ ದೊಂದಿಗೆ ಸ್ವತಂತ್ರ ಭಾರತದ ಸಿಂಹಾವಲೋಕನ ಅಚ್ಚರಿಗೊಳಿಸುವಂಥದ್ದು ಎಂದು ಬೊಟ್ಟು ಮಾಡಿದ ಸಚಿವರು ಸ್ವಾತಂತ್ರ್ಯ ಸಂದರ್ಭ ದೇಶದ ಜನಸಂಖ್ಯೆ 33 ಕೋಟಿ ಇದ್ದದ್ದು, ಇಂದು 120 ಕೋಟಿ ದಾಟಿದೆ ಎಂಬದಾಗಿ ಉಲ್ಲೇಖಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣಗೊಳಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ಗಣರಾಜ್ಯೋತ್ಸವ ರಾಷ್ಟ್ರೀಯ ಹಬ್ಬದೊಂದಿಗೆ ನಾಗರಿಕರ ಸಾರ್ವಭೌಮ ದಿನವೆಂದರು.

ಜಿಲ್ಲೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ

ಸ್ವಹಿತಕ್ಕಾಗಿ ಜನ ಸಾಮಾನ್ಯರ ಬದುಕು ಉರುಳಾಗದಿರಲಿ ಎಂದ ಸಚಿವರು ಸೌಹಾರ್ದತೆ, ಸಹಬಾಳ್ವೆ ಹಾಗೂ ಎಲ್ಲರ ಅಭಿವೃದ್ದಿ ಗಣತಂತ್ರದ ಆಶಯವಾಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಮಂಡಿತವಾಗಿರುವ ಸಾರ್ವಭೌಮ, ಸಮಾಜವಾದೀ, ಸರ್ವಧರ್ಮ, ಸಮಭಾವದ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಈ ಆಶಯಗಳು ಜನತಂತ್ರದ ಬುನಾದಿಯಾಗಬೇಕಿದೆ ಎಂದರು.

ಬೇರೆಯವರ ಮನೆ ಕತ್ತಲೆ ಇದ್ದರೆ ನಮಗೆ ದೀಪ ಹಚ್ಚುವ ಶಕ್ತಿ ಇಲ್ಲದಿರಬಹುದು ಆದರೆ ಯಾರ ಮನೆಯಲ್ಲಾದರೂ ದೀಪ ಉರಿಯುತ್ತಿದ್ದರೆ ಅದನ್ನು ಆರಿಸಬಾರದು. ಜನಸಾಮಾನ್ಯರ ಬಗ್ಗೆ ಆಳವಾಗಿ ಚಿಂತಿಸಿ, ಜನಪರ ಯೋಜನೆಗಳನ್ನು ರೂಪಿಸಿದ ಹೆಗ್ಗಳಿಕೆ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕಿವಿಮಾತು ಹೇಳಿದರು.

ಹಾರಂಗಿ ನಿರಾಶ್ರಿತರಿಗೆ ಹಕ್ಕುಪತ್ರ

ಹಲವಾರು ದಶಕಗಳಿಂದ ಬೇಡಿಕೆಯಾಗಿಯೇ ಉಳಿದಿದ್ದ ಹಾರಂಗಿ ಜಲಾಶಯ ನಿರಾಶ್ರಿತರಿಗೆ ಸೋಮವಾರಪೇಟೆ ತಾಲ್ಲೂಕಿನ ಅತ್ತೂರು ಮತ್ತು ಯಡವನಾಡು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅವರಿಗೆ ಆರ್.ಟಿ.ಸಿ.ಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಅಕ್ರಮ-ಸಕ್ರಮ

(ಮೊದಲ ಪುಟದಿಂದ) ಯೋಜನೆಯ 94 ಸಿ ರಡಿ 5514 ಮತ್ತು 94 ಸಿಸಿ ರಡಿ 799 ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದರು.

528 ಮನೆ : ಕೊಡಗು ಜಿಲ್ಲೆಯ ಜಟಿಲ ಸಮಸ್ಯೆಯಾಗಿದ್ದ ದಿಡ್ಡಹಳ್ಳಿ ಆದಿವಾಸಿಗಳ ಬೇಡಿಕೆಗೆ ಸರ್ಕಾರವು ಸ್ಪಂದಿಸಿ, ಸುಮಾರು 528 ಆದಿವಾಸಿ ಕುಟುಂಬಗಳಿಗೆ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಗ್ರಾಮಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಸದರಿ ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಜಿಲ್ಲೆಯ ಪರಿಶಿಷ್ಟ ಪಂಗಡದ ಜೇನುಕುರುಬ, ಎರವ, ಸೋಲಿಗ ಜನಾಂಗದ ಸುಮಾರು 8,200 ಕುಟುಂಬಗಳಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. 1392 ಅರಣ್ಯವಾಸಿಗಳಿಗೆ ವೈಯಕ್ತಿಕ ಅರಣ್ಯ ಹಕ್ಕು ಪತ್ರ ನೀಡಿದೆ. 45 ಸಮುದಾಯ ಕ್ಲೇಮುಗಳನ್ನು ಮಾನ್ಯ ಮಾಡಲಾಗಿದೆ ಎಂದು ಸಚಿವರು ಗಮನ ಸೆಳೆದರು.

ಕೊಡಗಿನ ವೈದ್ಯಕೀಯ ಕಾಲೇಜಿಗೆ ಸರ್ಕಾರವು ರೂ. 150 ಕೋಟಿಗಳ ವೆಚ್ಚ ಭರಿಸಿ, ಸುಸಜ್ಜಿತ ಕಾಲೇಜನ್ನು ನಿರ್ಮಿಸಿದ್ದು, ಕಳೆದ 2 ವರ್ಷಗಳಿಂದ ಪ್ರತಿ ವರ್ಷ 150 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ನಗರದ ವ್ಯಾಪ್ತಿಯಲ್ಲಿ 5 ಎಕರೆ ಪ್ರದೇಶದಲ್ಲಿ ಸುಮಾರು ರೂ. 21 ಕೋಟಿ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ರೂ. 4.50 ಕೋಟಿ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಬಡವರು, ಕೂಲಿ ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡಲು ಜಿಲ್ಲೆಯಲ್ಲಿ ಮೂರು ಕಡೆ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲಾಗುತ್ತಿದೆ. ಕೊಡಗು ಜಿಲ್ಲೆಗೆ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಅಡಿ ರೂ. 100 ಕೋಟಿ ಮಂಜೂರಾತಿ ನೀಡಿದ್ದು, ರೂ. 50 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರಲ್ಲದೆ, ಜಿಲ್ಲೆಯ 33,967 ರೈತರಿಗೆ ರೂ. 151 ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದು ಅಂಕಿ ಅಂಶ ನೀಡಿದರು.

ಜಿಲ್ಲೆಯಲ್ಲಿ ರೂ. 4 ಕೋಟಿ ವೆಚ್ಚದಲ್ಲಿ ಉಪ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಬಿದಾಯಿ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದ 760 ಫಲಾನುಭವಿಗಳಿಗೆ ತಲಾ ರೂ. 50 ಸಾವಿರದಂತೆ ರೂ. 380 ಲಕ್ಷ ಪಾವತಿಸಿದೆ ಎಂದ ಅವರು, ನಗರೋತ್ಥಾನ ಯೋಜನೆಯಡಿ ಕೊಡಗು ಜಿಲ್ಲೆಯ ಒಂದು ನಗರಸಭೆ ಮತ್ತು ಮೂರು ಪಟ್ಟಣ ಪಂಚಾಯಿತಿಗಳಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸುಮಾರು ರೂ. 131 ಕೋಟಿ ಬಿಡುಗಡೆಯಾಗಿದೆ. ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಧಾರ್ಮಿಕ ಅಭಿವೃದ್ಧಿ : ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರೂ. 325 ಲಕ್ಷಗಳ ವೆಚ್ಚದಲ್ಲಿ ಕೊಡಗಿನ ಶ್ರೀ ಇಗ್ಗುತ್ತಪ್ಪ ದೇವಸ್ಥಾನ ಕಾಂಕ್ರೀಟ್ ರಸ್ತೆ ಹಾಗೂ ನಾಪೋಕ್ಲು ಮಕ್ಕಿ ಶಾಸ್ತಾವು ದೇವಸ್ಥಾನದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 11 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ ಹಾಗೂ ವಿವಿಧ ಚರ್ಚ್ ಮತ್ತು ಮಸೀದಿಗಳಿಗೆ ಸುಮಾರು ರೂ. 650 ಲಕ್ಷಗಳ ಅನುದಾನ ಮಂಜೂರು ಮಾಡಿದೆ ಎಂದರು.

ಮಕ್ಕಳಿಗೆ ಕ್ಷೀರಭಾಗ್ಯ : ಕ್ಷೀರಭಾಗ್ಯ ಯೋಜನೆಯಡಿ 38,499 ಮಕ್ಕಳಿಗೆ ಉಚಿತ ಹಾಲು ಪೂರೈಸಿದ್ದು, ಇದಕ್ಕಾಗಿ ರೂ. 142.54 ಲಕ್ಷ ಖರ್ಚು ಭರಿಸಲಾಗಿದೆ. ಕ್ಷೀರಧಾರೆ ಯೋಜನೆಯಡಿ 10,813 ಫಲಾನುಭವಿಗಳಿಗೆ ಲಾಭ ದೊರೆತಿದೆ. ಭೂ ದಾಖಲೆಗಳ ಇಲಾಖಾ ವ್ಯಾಪ್ತಿಯಲ್ಲಿ 29,029 ಪೋಡಿ ಪ್ರಕರಣ ವಿಲೇ ಮಾಡಲಾಗಿದ್ದು, ವಿದ್ಯಾಸಿರಿ ಯೋಜನೆಯಡಿ 1,704 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದು ಇದಕ್ಕಾಗಿ ರೂ. 118.88 ಲಕ್ಷ ಖರ್ಚು ಮಾಡಲಾಗಿದೆ ಎಂದು ಅಂಕಿ ಅಂಶ ನೀಡಿದರು.

ಹಿಂದುಳಿದ - ಅಲ್ಪಸಂಖ್ಯಾತರ ಕಲ್ಯಾಣ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹೊಸದಾಗಿ ನಾಲ್ಕು ವಿದ್ಯಾರ್ಥಿ ನಿಲಯ ಪ್ರಾರಂಭಿಸಲಾಗಿದೆ. ಹಾಗೂ ಮೂರು ವಸತಿ ಶಾಲೆಗಳ ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ. 31.00 ಕೋಟಿ ಖರ್ಚು ಮಾಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕೊಡ್ಲಿಪೇಟೆ ಮತ್ತು ವೀರಾಜಪೇಟೆಯಲ್ಲಿ ತಲಾ 10 ಕೋಟಿ ರೂ.ಗಳಂತೆ ಒಟ್ಟು ರೂ. 20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣವಾಗಿದೆ ಎಂದು ಮಾಹಿತಿಯಿತ್ತ ಸಚಿವರು, ಮದರಸಗಳ ಆಧುನೀಕರಣಕ್ಕಾಗಿ ರೂ. 600 ಲಕ್ಷ ಬಿಡುಗಡೆಯಾಗಿದೆ ಎಂದರು.

ಕೃಷಿ ಸೌಲಭ್ಯ : ಕೃಷಿ ಇಲಾಖೆ ವಿವಿಧ ಯೋಜನೆಗಳಡಿಯಲ್ಲಿ 1,24,261 ಫಲಾನುಭವಿಗಳು ವಿವಿಧ ಸೌಲಭ್ಯಗಳನ್ನು ಹೊಂದಿದ್ದಾರೆ. ನಬಾರ್ಡ್ ಸೇತುವೆ ನಿರ್ಮಾಣ ಕಾಮಗಾರಿಗೆ ರೂ. 11.07 ಕೋಟಿ, ಕೊಡಗು ವಿಶೇಷ ಪ್ಯಾಕೇಜ್‍ಗೆ ರೂ. 59.48 ಕೋಟಿ ಹಾಗೂ ರೂ. 50 ಕೋಟಿ, ಗ್ರಾಮೀಣ ರಸ್ತೆಗೆ ರೂ. 75.68 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ ಎಂಬದಾಗಿ ಅವರು ತಿಳಿಸಿದರು.

ವಿದ್ಯುತ್ ಸೌಲಭ್ಯ : ಜಿಲ್ಲೆಯಲ್ಲಿ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಯಡಿ 15,177 ಮಂದಿಗೆ ರೂ. 312.87 ಲಕ್ಷ ಮಾಡಲಾಗಿದ್ದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2017-18ನೇ ಸಾಲಿನ ಮಾನವ ದಿನಗಳ ಸೃಜನೆಯ ವಾರ್ಷಿಕ ಗುರಿ 3.43 ಲಕ್ಷಕ್ಕೆ ಎದುರಾಗಿ ಇಲ್ಲಿವರೆಗೆ ರೂ. 3.00 ಲಕ್ಷ ಮಾನವ ದಿನಗಳ ಸೃಜನೆಯಾಗಿರುತ್ತದೆ. ಒಟ್ಟು ರೂ. 993.16 ಲಕ್ಷ ವೆಚ್ಚವಾಗಿದ್ದು, ವಾರ್ಷಿಕ ಶೇ. 69.45 ಸಾಧನೆ ಆಗಿರುತ್ತದೆ ಎಂದು ಸಚಿವರು ಗಮನ ಸೆಳೆದರು.

12277 ಫಲಾನುಭವಿಗಳು : ವಸತಿ ಯೋಜನೆ ಗ್ರಾಮೀಣ ಭಾಗದ ಜನರಿಗೆ ಮನೆಯನ್ನು ನಿರ್ಮಿಸಲು ಸರ್ಕಾರ ವಿಶೇಷ ಒತ್ತನ್ನು ನೀಡಿದ್ದು, ವಿವಿಧ ವಸತಿ ಯೋಜನೆಯಡಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ 12,277 ಫಲಾನುಭವಿಗಳನ್ನು ಆಯ್ಕೆಗೊಳಿಸಲಾಗಿದ್ದು, 6,092 ಮನೆಗಳು ಪೂರ್ಣಗೊಂಡಿದ್ದು, 2,752 ಮನೆಗಳು ವಿವಿಧ ಹಂತಗಳಲ್ಲಿರುತ್ತವೆ. ಪ್ರಗತಿಯಲ್ಲಿರುವ ಎಲ್ಲಾ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ಕುಡಿಯುವ ನೀರು : ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ ಈವರೆಗೆ ಒಟ್ಟು ರೂ. 527.84 ಲಕ್ಷಗಳು ವೆಚ್ಚವಾಗಿರುತ್ತದೆ. ಪ್ರಸಕ್ತ ಸಾಲಿಗೆ ಪಿ.ಡಬ್ಲ್ಯುಎಸ್ ಯೋಜನೆಯಡಿಯಲ್ಲಿ 7 ಯೋಜನೆಗಳು ಪೂರ್ಣಗೊಂಡಿದ್ದು, ಎಂಡಬ್ಲ್ಯುಎಸ್ ಯೋಜನೆಯಡಿಯಲ್ಲಿ 19 ಯೋಜನೆಗಳು ಪೂರ್ಣಗೊಂಡಿವೆ. 2017-18ನೇ ಸಾಲಿಗೆ 2 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗಳು ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಗ್ರಾಮ ವಿಕಾಸ : ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಪ್ರತಿ ಗ್ರಾಮಕ್ಕೆ ರೂ. 75 ಲಕ್ಷದಂತೆ 10 ಗ್ರಾಮಗಳಿಗೆ ಒಟ್ಟು ರೂ. 750 ಲಕ್ಷಗಳಿಗೆ ಗ್ರಾಮ ವಿಕಾಸ ಯೋಜನೆಯಲ್ಲಿ ಅನುಮೋದನೆಗೊಂಡಿವೆ ಎಂದರು. ಈಗಾಗಲೇ 2 ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು. ಉಳಿದ 8 ಗ್ರಾಮಗಳ ಕಾಮಗಾರಿಗಳ ಪ್ರಗತಿಯು ಅಂತಿಮ ಹಂತದಲ್ಲಿದ್ದು, ಇಲ್ಲಿಯವರೆಗೆ ಒಟ್ಟು ರೂ. 572.53 ಲಕ್ಷ ಬಿಡುಗಡೆಯಾಗಿದ್ದು, ರೂ. 465.60 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಮಾಹಿತಿಯಿತ್ತರು. ಅಲ್ಲದೆ ರೂ. 1 ಲಕ್ಷದಂತೆ 12 ಗ್ರಾಮಗಳ ಅಭಿವೃದ್ಧಿಗೆ ರೂ. 1200 ಲಕ್ಷವನ್ನು ಗ್ರಾಮ ವಿಕಾಸ ಯೋಜನೆಗಾಗಿ ಕಲ್ಪಿಸಲಾಗುತ್ತಿದೆ ಎಂದು ಸಚಿವ ಸೀತಾರಾಂ ವಿವರಿಸಿದರು.