ಗೋಣಿಕೊಪ್ಪ ವರದಿ, ಜ. 26 : ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾಷ್ಟ್ರಪತಿ ಅವರ ಬೆಂಗಾವಲು ಪಡೆಯಲ್ಲಿ ಕೊಡಗಿನ ಮೂವರು ಯೋಧರು ಪಾಲ್ಗೊಳ್ಳುವ ಮೂಲಕ ವಿಶೇಷತೆ ಮೂಡಿಸಿದರು.
ರಾಷ್ಟ್ರಪತಿ ಭವನದಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಇಂಡಿಯಾ ಗೇಟ್ ಪರೇಡ್ ಜಾಗಕ್ಕೆ ಕರೆತರುವ ಸಂದರ್ಭ ಕರ್ನಲ್ ಬೊಮ್ಮಂಡ ಧೀರಜ್ ಚಂಗಪ್ಪ ರಾಷ್ಟ್ರಪತಿಯವರ ಬೆಂಗಾವಲು ಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.
ಅಮ್ಮತ್ತಿಯ ಬೊಮ್ಮಂಡ ಚಂಗಪ್ಪ ಮತ್ತು ರೀಟಾ ದಂಪತಿಯ ಪುತ್ರರಾಗಿರುವ ಬೊಮ್ಮಂಡ ಧೀರಜ್ ಚಂಗಪ್ಪ ಕಳೆದ ವರ್ಷ ಕೂಡ ಬೆಂಗಾವಲು ಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ಇವರ ತಂಡದಲ್ಲಿ 45 ಅಶ್ವದಳ ಸೈನಿಕರು ಪಾಲ್ಗೊಂಡಿದ್ದರು. ನಿವೃತ್ತ ಕರ್ನಲ್ ಬಲ್ಯಮಾಡ ಕಾವೇರಪ್ಪ ಅವರ ಮಗ ಬಲ್ಯಮಂಡ ತಿಮ್ಮಯ್ಯ ಅವರು ಮೆರವಣಿಗೆಯಲ್ಲಿ ಬಹದ್ದೂರ್ ಆಗಿ ನೇತೃತ್ವ ವಹಿಸಿದರು. ಮಂಡೇಪಂಡ ಸದಾ ಚಂಗಪ್ಪ ಅವರ ಮಗ ಮಂಡೇಪಂಡ ಸಿ. ತಿಮ್ಮಯ್ಯ ಅವರು ಎಂಐಜಿ 29 ಫ್ಲೈಆಫ್ ಆಗಿ ನೇತೃತ್ವ ವಹಿಸಿದ್ದರು.