ಮಡಿಕೇರಿ, ಜ. 25: ಸಮಾಜ ಮತ್ತು ಮನಸ್ಸು-ಮನಸ್ಸುಗಳನ್ನು ಒಂದುಗೂಡಿಸುವ ಸಲುವಾಗಿ ಸೌಹಾರ್ದ ಕರ್ನಾಟಕ ವತಿಯಿಂದ ತಾ. 30 ರಂದು ರಾಜ್ಯದಾದ್ಯಂತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಪೂರ್ವಭಾವಿ ಸಭೆ ನಗರದ ಬಾಲಭವನದಲ್ಲಿ ನಡೆಯಿತು.ಸೌಹಾರ್ದ ಕರ್ನಾಟಕ ಮಡಿಕೇರಿ ತಾಲೂಕು ಸಂಚಾಲಕ ಬಿ.ಎ. ಷಂಶುದ್ದೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲೆಯ ಮೂರು ತಾಲೂಕು ಕೇಂದ್ರ ಹಾಗೂ ಪ್ರಮುಖ ಪಟ್ಟಣಗಳಲ್ಲಿ ಮಾನವ ಸರಪಳಿ ಆಯೋಜಿಸುವ ಸಲುವಾಗಿ ಚರ್ಚೆ ನಡೆಸಲಾಯಿತು.ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ಸಿದ್ದಾಪುರ, ವೀರಾಜಪೇಟೆ, ಗೋಣಿಕೊಪ್ಪಲು ಪಟ್ಟಣಗಳಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ಒಟ್ಟು ಸೇರಿ 4 ಗಂಟೆಗೆ 10 ನಿಮಿಷ ಮಾನವ ಸರಪಳಿ ರಚಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಡಿಕೇರಿ ನಗರದಲ್ಲಿ ಸುದರ್ಶನ ವೃತ್ತದಿಂದ ಎ.ವಿ. ಶಾಲೆವರೆಗೆ ಮಾನವ ಸರಪಳಿ ರಚಿಸುವಂತೆಯೂ, ಅದಕ್ಕಾಗಿ ನಗರ ಸೇರಿದಂತೆ ಸುತ್ತಮುತ್ತಲಿನ ವಿವಿಧ ಸಂಘ-ಸಂಸ್ಥೆಗಳನ್ನು ಸಂಪರ್ಕಿ ಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿ.ಎ. ಷಂಶುದ್ದೀನ್ ಅವರು, ಇತ್ತೀಚೆಗೆ ಸಮಾಜ ಮತ್ತು ಮನಸ್ಸು-ಮನಸ್ಸುಗಳನ್ನು ಒಡೆಯುವ ಕೆಲಸ ಹೆಚ್ಚಾಗುತ್ತಿದ್ದು, ಮನಸ್ಸುಗಳನ್ನು ಒಂದುಗೂಡಿಸುವ ಕೆಲಸವಾಗ ಬೇಕಾಗಿದೆ. ಸಮಾಜದಲ್ಲಿ ಸೌಹಾರ್ದತೆಯನ್ನು ಮೂಡಿಸುವ ಸಲುವಾಗಿ ಮಾನವ ಸರಪಳಿಯನ್ನು ಆಯೋಜಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸಮಾಜದಲ್ಲಿ ಶಾಂತಿಯನ್ನು ಬಯಸಬೇಕು ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ವಿವಿಧ ರಾಜಕೀಯ ಪಕ್ಷಗಳ

(ಮೊದಲ ಪುಟದಿಂದ) ಪ್ರಮುಖರುಗಳಾದ ಟಿ.ಪಿ. ರಮೇಶ್, ಕೆ.ಟಿ. ಬೇಬಿಮ್ಯಾಥ್ಯೂ, ಮುನೀರ್ ಅಹ್ಮದ್, ಚುಮ್ಮಿ ದೇವಯ್ಯ, ಐ.ಆರ್. ದುರ್ಗಾಪ್ರಸಾದ್, ಕೆ.ಎಂ. ಗಣೇಶ್, ಜಾಯ್ಸ್‍ಮೆನೇಜಸ್, ಪಿ.ಎಂ. ಖಾಸಿಂ, ಹೆಚ್.ಎಲ್. ದಿವಾಕರ್, ಲೀಲಾ ಶೇಷಮ್ಮ, ಸೋಮಣ್ಣ, ಉಸ್ಮಾನ್, ಹನೀಫ್, ಹರೀಶ್ ಹಾಗೂ ಇನ್ನಿತರರು ಭಾಗವಹಿಸಿ ಸಲಹೆಗಳನ್ನು ನೀಡಿದರು.

ವೀರಾಜಪೇಟೆ: ವೀರಾಜಪೇಟೆ ನಗರದಲ್ಲಿಯೂ ತಾ. 30 ರಂದು ಸೌಹಾರ್ದತೆಗಾಗಿ ಕರ್ನಾಟಕ ಮಾನವ ಸರಪಳಿ ನಡೆಯಲಿದೆಯೆಂದು ತಾಲೂಕು ಸಂಚಾಲನಾ ಸಮಿತಿ ಸಂಚಾಲಕ ಎಂ.ಪಿ. ಕೇಶವ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವೀರಾಜಪೇಟೆಯ ಗಡಿಯಾರ ಕಂಬದಿಂದ ಮುಖ್ಯ ರಸ್ತೆ, ಖಾಸಗಿ ಬಸ್ಸು ನಿಲ್ದಾಣ, ಸುಣ್ಣದಬೀದಿ, ಗೋಣಿಕೊಪ್ಪ ರಸ್ತೆ, ದೊಡ್ಡಟ್ಟಿ ಚೌಕಿಗಾಗಿ ಪುನಃ ಗಡಿಯಾರಕಂಬದವರೆಗೆ ಮಾನವ ಸರಪಳಿ ನಿರ್ಮಿಸಲಾಗುವದು. ಕೋಮು ಸಾಮರಸ್ಯ ಬಿತ್ತರಿಸುವ ಭಿತ್ತಿಪತ್ರ ಹಾಗೂ ಪ್ಲಕಾರ್ಡ್‍ಗಳನ್ನು ಪ್ರದರ್ಶಿಸಲಾಗುವದು. ಈ ಬಗ್ಗೆ ಪ್ರಚಾರದ ಅಂಗವಾಗಿ ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳನ್ನು, ಜನ ಪ್ರತಿನಿಧಿಗಳನ್ನು ಸ್ವಯಂ ಸೇವಾ ಸಂಘಟನೆಗಳನ್ನು, ಕಾರ್ಮಿಕ ಸಂಘಟನೆಗಳನ್ನು, ಸ್ತ್ರೀ ಶಕ್ತಿ ಗುಂಪುಗಳನ್ನು ಶಿಕ್ಷಣ ಸಂಸ್ಥೆಗಳನ್ನು ಕಾರ್ಯಕ್ರಮದಲ್ಲಿ ಕೈಜೋಡಿಸುವಂತೆ ಕೋರಲಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಸಂಘಟನೆಗಳನ್ನು ಕಾರ್ಯಕ್ರಮದಿಂದ ದೂರ ಇಡುವ ತೀರ್ಮಾನ ಕೈಗೊಳ್ಳಲಾಗಿದೆ. ಎಂದರು.