ಮಡಿಕೇರಿ, ಜ. 25: ರಾಜಧಾನಿ ಬೆಂಗಳೂರಿನ ಖಾಸಗಿ ಸಂಸ್ಥೆ ಯೊಂದರಲ್ಲಿ ಉದ್ಯೋಗಿಯಾಗಿರುವ ಶಿವಮೊಗ್ಗ ಮೂಲದ ಯುವಕನೊಬ್ಬ ತನ್ನ ಸಹೋದ್ಯೋಗಿ ಯುವತಿಯನ್ನು ವಿವಾಹವಾಗುವದಾಗಿ ನಂಬಿಸಿ ನಗರಕ್ಕೆ ಕರೆತಂದು ಅತ್ಯಾಚಾರವೆಸಗಿ ಬಳಿಕ ತಲೆಮರೆಸಿಕೊಂಡಿರುವ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ.

ರಾಜಧಾನಿ ಬೆಂಗಳೂರಿನ ಹೆಚ್.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಖಾಸಗಿ ಉದ್ದಿಮೆ ಯೊಂದರಲ್ಲಿ ಉದ್ಯೋಗಿಯಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿ ಎನ್ನಲಾದ ದಿನೇಶ್ ಎಂಬಾತ, ಅದೇ ಸಂಸ್ಥೆಯಲ್ಲಿ ತನ್ನ ಸಹೋದ್ಯೋಗಿ ಯಾಗಿರುವ 24ರ ಹರೆಯದ ಬೆಂಗಳೂರಿನ ಹೇಮಂತನಗರದ ಯುವತಿಯನ್ನು ವಿವಾಹವಾಗುವದಾಗಿ ನಂಬಿಸಿ ಮಡಿಕೇರಿಗೆ ಕರೆತಂದಿದ್ದಾಗಿ ಗೊತ್ತಾಗಿದೆ.

ತಾ.23ರಂದು ಹಗಲು 12 ಗಂಟೆ ಸುಮಾರಿಗೆ ಮಡಿಕೇರಿ ಸುದರ್ಶನ ವೃತ್ತ ಬಳಿಯ ಹೋಂ ಸ್ಟೇಗೆ ಬರುವದ ರೊಂದಿಗೆ ಮರು ದಿವಸ ಹಗಲು 11 ಗಂಟೆಯ ತನಕ ಅಲ್ಲಿ ತಂಗಿದ್ದಾರೆ. ಈ ವೇಳೆ ಯುವತಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾಗಿಯೂ, ಬಳಿಕ ಮರಳಿ ಬೆಂಗಳೂರಿಗೆ ಕರೆದೊಯ್ದಿರುವ ದಾಗಿಯೂ ತಿಳಿದುಬಂದಿದೆ.

ಆನಂತರ ಆರೋಪಿ ದಿನೇಶ್ ತನ್ನನ್ನು ವಿವಾಹವಾಗದೆ ತಲೆಮರೆಸಿ ಕೊಂಡಿದ್ದಾಗಿ, ಯುವತಿಯು ಘಟನೆ ಸಂಬಂಧ ಅಲ್ಲಿನ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾಳೆ. ಈ ಸಂಬಂಧ ಹೆಚ್.ಎ.ಎಲ್. ಠಾಣೆಯಲ್ಲಿ ಆರೋಪಿ ವಿರುದ್ಧ ಪೊಲೀಸ್ ಅಪರಾಧ ಕಾಯ್ದೆ 376, 417, 420ರ ಅನ್ವಯ ಮೊಕದ್ದಮೆ ದಾಖಲಾಗಿದೆ. ಅಲ್ಲದೆ ಮಡಿಕೇರಿಯಲ್ಲಿ ದುಷ್ಕøತ್ಯ ನಡೆದಿರುವ ಸಂಬಂಧ ರಾಜಧಾನಿ ಪೊಲೀಸರು ಪ್ರಕರಣವನ್ನು ಮಡಿಕೇರಿ ನಗರಠಾಣೆಗೆ ವರ್ಗಾಯಿಸಿದ್ದಾರೆ. ಆ ಮೇರೆಗೆ ಮಡಿಕೇರಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರರಾಜ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.