ಮಡಿಕೇರಿ, ಜ. 25: ಕೊಡಗಿನ ಐತಿಹಾಸಿಕ ಹಿನ್ನೆಲೆಯೊಂದಿಗೆ ನಾಡಿನ ಸಂಸ್ಕøತಿ, ಪದ್ಧತಿ, ಪರಂಪರೆಯನ್ನು ಒಳಗೊಂಡಿರುವ ದಾಖಲೆ ಸಂಗ್ರಹಿಸಲು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಆಡಳಿತ ಮಂಡಳಿ ಪ್ರಯತ್ನಿಸುವದಾಗಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ನುಡಿದರು. ಇಲ್ಲಿನ ಅರಸು ಭವನದಲ್ಲಿ ಇಂದು ಹಿಂದಿನ ಅಕಾಡೆಮಿಗಳ ಎಲ್ಲ ಅಧ್ಯಕ್ಷರು ಹಾಗೂ ವಿವಿಧ ಸಮಾಜಗಳ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗಿನ ಸಮಗ್ರ ಇತಿಹಾಸವನ್ನು ಸಂಗ್ರಹಿಸಿ ದಾಖಲೆಗಳನ್ನು ಪ್ರಚುರಪಡಿಸಲು ಎಲ್ಲರ ಸಹಕಾರ ಕೋರಿದರು.
ಕೊಡಗಿನ ಪರಂಪರೆಯನ್ನು ವಿದ್ಯಾರ್ಥಿ ದಿಸೆಯಲ್ಲೇ ಮಕ್ಕಳಿಗೆ ಕಲಿಸಲು ಅಕಾಡೆಮಿಯಿಂದ ಆದ್ಯತೆ ನೀಡಲಾಗುವದು ಎಂದು ಅಭಿಪ್ರಾಯಪಟ್ಟ ಅವರು, ಕೊಡವಾ ಮೆಯ ಕುರಿತು ಅನುಭವವಿರುವ ಎಲ್ಲರ ಸಹಕಾರ, ಸಲಹೆಗಳನ್ನು ಪಡೆದುಕೊಂಡು ಕಾರ್ಯಚಟುವಟಿಕೆ ಹಮಿಕೊಳ್ಳಲಾಗುವದು ಎಂದು ಈ ಸಂದರ್ಭ ನುಡಿದರು. ಮುಂದಿನ ವರ್ಷ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವದು ಎಂದು ಅಧ್ಯಕ್ಷರು ಪ್ರಕಟಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಅನುಭವಿಗ ಳೊಂದಿಗೆ ಮಾತುಕತೆ ಕಾರ್ಯಕ್ರಮ ಉದ್ಘಾಟಿಸಿ
(ಮೊದಲ ಪುಟದಿಂದ) ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕೊಡವ ಭಾಷಿಕ ಜನಾಂಗದ ಎಲ್ಲರನ್ನು ಒಗ್ಗೂಡಿಸಿ ಕೊಂಡು ಚಟುವಟಿಕೆಗಳನ್ನು ನಡೆಸುವ ಮೂಲಕ ಕೊಡವಾಮೆಯ ಉಳಿವಿಗೆ ಶ್ರಮಿಸಲು ಕರೆ ನೀಡಿದರು. ಆ ದಿಸೆಯಲ್ಲಿ ಅಕಾಡೆಮಿ ಎಲ್ಲ ರೀತಿ ಸಹಕರಿಸುವದಾಗಿ ಭರವಸೆ ನೀಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷ ಉಳ್ಳಿಯಡ ಎಂ. ಪೂವಯ್ಯ ಅವರು ಮಾತನಾಡಿ, ಇದುವರೆಗೆ ಅಕಾಡೆಮಿಯಲ್ಲಿ ಶ್ರಮಿಸಿರುವ ಎಲ್ಲರು ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ ರುವದಾಗಿ ಶ್ಲಾಘಿಸುತ್ತಾ, ಮುಂದಿನ ಅವಧಿಯಲ್ಲಿ ಹಿಂದಿನ ಪ್ರಯತ್ನ ಗಳನ್ನು ಮುಂದುವರಿಸುತ್ತಾ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಶ್ರಮಿಸುವಂತೆ ಸಲಹೆ ನೀಡಿದರು. ಅಲ್ಲದೆ ಕೊಡವ ಭಾಷೆಯಲ್ಲಿ ಮಕ್ಕಳಿಗೆ ಪಠ್ಯಕ್ರಮ ಕಲಿಸಲು ಯೋಜನೆ ರೂಪಿಸ ಬೇಕೆಂದು ಅಭಿಪ್ರಾಯಪಟ್ಟರು.
ಗ್ರಂಥಾಲಯಕ್ಕೆ ಸಲಹೆ: ಮತ್ತೋರ್ವ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಮಾತನಾಡಿ, ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡಗಿನ ಹಿನ್ನೆಲೆಯ ಮಂದ್ಮನೆ ಮಾದರಿ ಅಕಾಡೆಮಿ ಕಚೇರಿಯೊಂದಿಗೆ ಸಮಗ್ರ ವಿಷಯವನ್ನೊಳಗೊಂಡ ಗ್ರಂಥಾಲಯ ಸ್ಥಾಪಿಸಲು ಮುಂದಾಗುವಂತೆ ಸಲಹೆ ನೀಡಿದರು.
ಹಿಂಜರಿಕೆ ಬೇಡ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಚಟುವಟಿಕೆಗಳನ್ನು ಸಮಾಜದ ನಡುವೆ ಕೊಂಡೊಯ್ಯುವಲ್ಲಿ ಶ್ರಮಿಸುವಂತೆ ಸಲಹೆ ನೀಡಿದ ನಿಕಟ ಪೂರ್ವ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಹೊಣೆಗಾರಿಕೆ ನಿರ್ವಹಿಸುವಾಗ ಹಿಂಜರಿಕೆ ಇಲ್ಲದೆ ಅಧಿಕಾರಿಗಳಿಂದ ಸಮರ್ಪಕವಾಗಿ ಕೆಲಸ ಮಾಡಿಸಿದರೆ ನಿರ್ದಿಷ್ಟ ಗುರಿ ತಲಪಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಆಂದೋಲನ ಅಗತ್ಯ: ಮತ್ತೋರ್ವ ಮಾಜಿ ಅಧ್ಯಕ್ಷ ರಂಗಕರ್ಮಿ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ಇತರ ಭಾಷೆಗಳಂತೆ ಕೊಡವ ಭಾಷೆಯ ಉಳಿವಿಗಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಚಟುವಟಿಕೆ ಗಳೊಂದಿಗೆ ಭಾಷಾ ಆಂದೋಲನ ಅಗತ್ಯವೆಂದು ಪ್ರತಿಪಾದಿಸಿದರು. ಈ ದಿಸೆಯಲ್ಲಿ ಅಕಾಡೆಮಿಯ ಚಟುವಟಿಕೆ ರೂಪಿಸು ವಲ್ಲಿ ಸರಕಾರಿ ಹಣ ಬಳಕೆಯಲ್ಲೂ ಜಾಗರೂಕ ಹೆಜ್ಜೆ ಇಡಬೇಕೆಂದು ಕಿವಿ ಮಾತು ಹೇಳಿದರು.
ಇಂದಿನ ಕಾರ್ಯಕ್ರಮದಲ್ಲಿ ವೀರಾಜಪೇಟೆ ಕೊಡವ ಸಮಾಜದ ವಾಂಚಿರ ನಾಣಯ್ಯ, ಮಕ್ಕಂದೂರು ಸಮಾಜದ ನಾಪಂಡ ಕಾಳಪ್ಪ, ಕುಶಾಲನಗರ ಕೊಡವ ಸಮಾಜದ ಪುಲಿಯಂಡ ಚಂಗಪ್ಪ, ಕುಡಿಯರ ಮುತ್ತಪ್ಪ ಸೇರಿದಂತೆ ಹಲವು ಜನಾಂಗಗಳ ಕೊಡವ ಭಾಷಿಕ ಪ್ರಮುಖರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ರಮೇಶ್ ಉತ್ತಪ್ಪ ಪ್ರಾಸ್ತಾವಿಕ ನುಡಿಯೊಂದಿಗೆ ಟಾಟು ಮೊಣ್ಣಪ್ಪ ನಿರೂಪಿಸಿ, ತೋರೇರ ಮುದ್ದಯ್ಯ ಸ್ವಾಗತಿಸಿದರು. ಅಕಾಡೆಮಿ ಸದಸ್ಯರು ಗಳು, ಸಿಬ್ಬಂದಿ ಸಹಿತ ಇತರರು ಪಾಲ್ಗೊಂಡಿದ್ದರು.