ಬಿ.ಎ. ಜೀವಿಜಯ

ಸೋಮವಾರಪೇಟೆ, ಜ. 25: ಸಂಕಷ್ಟದಲ್ಲಿರುವ ರಾಜ್ಯದ ರೈತರ ಸಾಲ ಮನ್ನಾ ಮಾಡುವದು ಸರ್ಕಾರಗಳ ಕರ್ತವ್ಯ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಹೇಳಿದರು.

ಸಮೀಪದ ತೋಳೂರುಶೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ವಲಯ ಜೆಡಿಎಸ್ ಕಾರ್ಯಕರ್ತರ ಸಭೆ ಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಶೇ. 81 ರಷ್ಟು ಸಂಪತ್ತು ಪ್ರಭಾವಿ ಕೈಗಾರಿಕೋದ್ಯಮಿಗಳ ಕೈಯಲ್ಲಿ ಇದೆ. ದೇಶದ ರೈತರು, ಶ್ರಮಜೀವಿಗಳು ಹಾಗೂ ಇತರ ಸಮುದಾಯಗಳ ಕೈಯಲ್ಲಿ ಶೇ. 19 ರಷ್ಟು ಸಂಪತ್ತು ಉಳಿದಿದೆ. ಆದರೆ ನಾವು ಕೊಟ್ಟ ತೆರಿಗೆ ಹಣ ಉದ್ಯಮಿಗಳ ಅಭಿವೃದ್ಧಿಗೆ ಮೀಸಲಾಗಿದೆ. ರೈತರು ತೆರಿಗೆ ನೀಡುತ್ತಿದ್ದಾರೆ. ಅವರು ಸಾಲ ಮನ್ನಾದ ಸೌಲಭ್ಯ ಪಡೆಯುವದು ಅವರ ಹಕ್ಕು ಎಂದು ಹೇಳಿದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವದರೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ಮುಖ್ಯ ಮಂತ್ರಿಯಾದರೆ ಪ್ರಥಮವಾಗಿ ರೈತರ ಸಾಲ ಮನ್ನಾ ಮಾಡಲಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗು ಬಿಜೆಪಿಯಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ. ರಾಜಕೀಯ ಬದಲಾವಣೆಯಾಗಬೇಕು. ಗ್ರಾಮೀಣ ಹಾಗೂ ನಗರವಾಸಿಗಳ ಜೀವನ ಮಟ್ಟದಲ್ಲಿ ಅಂತರ ಹೆಚ್ಚಾಗುತ್ತಿದೆ. ಗ್ರಾಮೀಣಾಭಿವೃದ್ಧಿಯ ಕಡೆಗೆ ಒಲವಿರುವ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ರೈತಾಪಿ ವರ್ಗ, ದೀನ ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಸಮುದಾಯಗಳ ಜನರು ಆಶೀರ್ವಾದ ಮಾಡಬೇಕು ಎಂದು ಹೇಳಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಯುವಶಕ್ತಿಯನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಈ ಪಕ್ಷಗಳಿಂದ ಮತಗಳು ಮೈಲಿಗೆಯಾಗುತ್ತಿವೆ. ರೈತರ ಆಪ್ತಮಿತ್ರ ಹೆಚ್.ಡಿ. ದೇವೆಗೌಡ ಹಾಗೂ ಕುಮಾರಸ್ವಾಮಿಯವರ ಉತ್ತಮ ಆಡಳಿತ, ರೈತಪರ ಕಾಳಜಿಯನ್ನು ಮತದಾರರು ಅರಿತ್ತಿರುವದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಲಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಜ್ಯ ಉಪಾಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿ, ಪಂಚಾಬಿನಲ್ಲಿ ಹೆಚ್.ಡಿ. ದೇವೆಗೌಡ ಹೆಸರಿನ ದೇವಜೀ ಭತ್ತದ ತಳಿ ಇದೆ. ದೇವೆಗೌಡರು ಪ್ರಧಾನಿಯಾಗಿದ್ದ ಸಂದರ್ಭ ಅವರ ರೈತಪರ ಯೋಜನೆಗಳಿಂದ ಅವರು ಹೆಸರು ಗಳಿಸಿದ್ದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಬಹುತೇಕ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ತೊರೆದ 43 ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.

ಪಕ್ಷದ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಾನಕಿ ವೆಂಕಟೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ, ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಜಿ.ಪಂ. ಮಾಜಿ ಅಧ್ಯಕ್ಷೆ ಹೆಚ್.ಬಿ. ಜಯಮ್ಮ, ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲ್‍ಗೌಡ, ತಾಲೂಕು ವಕ್ತಾರ ಎ.ಜೆ. ಕೃಷ್ಣಪ್ಪ, ವಲಯಾಧ್ಯಕ್ಷ ವಿಜಯ್, ಪಕ್ಷದ ಪ್ರಮುಖರಾದ ಕೆ.ಎಂ.ಬಿ. ಗಣೇಶ್, ಕೆ.ಟಿ. ಪರಮೇಶ್, ಎಸ್.ಎಂ. ಡಿಸಿಲ್ವಾ, ಐ.ಪಿ. ಭವೇರಪ್ಪ, ಐ.ಪಿ. ನಿಂಗಪ್ಪ, ಡಿ.ಬಿ. ಅಣ್ಣಯ್ಯ ಉಪಸ್ಥಿತರಿದ್ದರು.