ಕುಶಾಲನಗರ, ಜ. 25: ಕಳೆದ 6 ದಶಕಗಳ ಕಾಲ ಪಟ್ಟಣ ಪಂಚಾಯಿತಿ ಕಚೇರಿ ಕಾರ್ಯ ನಿರ್ವಹಿಸಿದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಕಚೇರಿ ತಾತ್ಕಾಲಿಕ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದ ರಸ್ತೆಯಲ್ಲಿರುವ ಸತ್ಯಸಾಯಿ ಕಾಲೇಜು ಕಟ್ಟಡದಲ್ಲಿ ಕಾರ್ಯಾರಂಭಿಸಿದೆ ಎಂದು ಪಂಚಾಯಿತಿ ಅಧ್ಯಕ್ಷೆ ರೇಣುಕಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಒಟ್ಟು ರೂ. 7.5 ಕೋಟಿ ವೆಚ್ಚದಲ್ಲಿ ನೂತನ ಮಳಿಗೆಗಳ ಸಂಕೀರ್ಣ ಕಾಮಗಾರಿಗೆ ಸಧ್ಯ ದಲ್ಲಿಯೇ ಚಾಲನೆ ದೊರೆಯಲಿದ್ದು, ಈ ಹಿನ್ನಲೆ ಹಳೆಯ ಕಟ್ಟಡವನ್ನು ತೆರವುಗೊಳಿಸಲಾಗಿದೆ ಎಂದರು.

ಹಳೆಯ ಕಟ್ಟಡದ ವ್ಯಾಪ್ತಿಯಲ್ಲಿ 22 ಅಂಗಡಿ ಮಳಿಗೆಗಳಿದ್ದು, ಅವುಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. 18 ಮಳಿಗೆದಾರರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದು ಈ ಬಗ್ಗೆ ಸಧ್ಯದಲ್ಲಿಯೇ ತೀರ್ಪು ಹೊರಬೀಳಲಿದೆ ಎಂದರು.

ಈ ಸಂದರ್ಭ ಮಾತನಾಡಿದ ಹಿರಿಯ ಸದಸ್ಯರಾದ ಹೆಚ್.ಜೆ. ಕರಿಯಪ್ಪ, ಕಳೆದ ಹಲವಾರು ವರ್ಷಗಳಿಂದ ಕಟ್ಟಡದಲ್ಲಿ ಆಡಳಿತ ಮಾಡಿದ ಗಣ್ಯರ ಬಗ್ಗೆ ಸ್ಮರಿಸಿದರು.

ಗೋಷ್ಠಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಕೆ. ಪಾರ್ವತಿ, ಸದಸ್ಯರಾದ ಎಂ.ಎಂ. ಚರಣ್, ಪ್ರಮೋದ್ ಮುತ್ತಪ್ಪ, ಮಧುಸೂದನ್, ಸುರಯ್ಯಭಾನು, ರಶ್ಮಿ, ಲಲಿತಾ, ಕವಿತಾ ಇದ್ದರು.