ಮಡಿಕೇರಿ, ಜ. 24: ಎತ್ತ ನೋಡಿದರೂ ಕೇಸರಿ ಬಾವುಟ..., ದಾರಿಯುದ್ದಕ್ಕೂ ಮೊಳಗಿದ ಜೈ ಜೈ ಬಿಜೆಪಿ..., ಎಂಬಿತ್ಯಾದಿ ಘೋಷಣೆ..., ವಾಹನಗಳಲ್ಲಿ... ಯುವಕರ ಕುತ್ತಿಗೆಯಲ್ಲಿ ಕಂಗೊಳಿಸಿದ ಬಿಜೆಪಿ ಬಾವುಟ..., ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಬಿಜೆಪಿ ನಾಯಕರುಗಳ ಪರ ಮುಗಿಲು ಮುಟ್ಟಿದ ಜೈಕಾರ...

ಈ ಚಿತ್ರಣ ಮಂಜಿನ ನಗರಿ ಮಡಿಕೇರಿಯಲ್ಲಿಂದು ಭಾರತೀಯ ಜನತಾ ಪಾರ್ಟಿಯಿಂದ ಆಯೋಜಿಸಲಾಗಿದ್ದ ಪರಿವರ್ತನಾ ಯಾತ್ರೆಯ ಅಭೂತಪೂರ್ವ ಮೆರವಣಿಗೆಯಲ್ಲಿ ಕಂಡು ಬಂತು. ಬೆಳಗ್ಗಿನಿಂದಲೇ ನಗರದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಪರಿವರ್ತನಾ ಯಾತ್ರೆಯ ಮೆರವಣಿಗೆಗೆ ಸಿದ್ಧತೆ ಕೈಗೊಳ್ಳಲಾಗಿತ್ತು. ಬಿಜೆಪಿ ಕಾರ್ಯಕರ್ತರು, ಸಂಘ ಪರಿವಾರದ ಕಾರ್ಯಕರ್ತರು ತಂಡೋಪ ತಂಡವಾಗಿ ದೇವಾಲಯದ ಬಳಿ ಬರಲಾರಂಭಿಸಿದ್ದರು. ಕೇಸರಿ ಬಾವುಟ ಹಿಡಿದು, ಬಿಜೆಪಿ ಲಾಂಛನವಿರುವ ಟೋಪಿ, ಟೀ ಶರ್ಟ್‍ಗಳನ್ನು ಧರಿಸಿದ್ದ ಕಾರ್ಯಕರ್ತರು, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಅವರ ಭಾವಚಿತ್ರವಿರುವ ಟೀ ಶರ್ಟ್‍ಗಳನ್ನು ಧರಿಸಿದ್ದ ಯುವಕರು ಮಹದೇವಪೇಟೆ ರಸ್ತೆಯುದ್ದಕ್ಕೂ ಜಮಾಯಿಸಿದ್ದರು. ಪರಿವರ್ತನಾ ಯಾತ್ರೆಯ ಕುರಿತಾದ ಹಾಡು ಸಂಗೀತವನ್ನೊಳಗೊಂಡ ಮೂರ್ನಾಲ್ಕು ವಾಹನಗಳಲ್ಲಿ ವಂದೇ ಮಾತರಂ..., ಕಮಲ ಅರಳಲಿ..., ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ..., ಎಂಬಿತ್ಯಾದಿ ಗೀತೆಗಳು ಮಾರ್ದನಿಸುತ್ತಿದ್ದವು.

ಇದೇ ವೇಳೆ ದೇವಾಲಯದ ಬಳಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ನೋಡುತ್ತಿದ್ದಂತೆ ಕಾರ್ಯಕರ್ತರ ಜೈಕಾರ ಮುಗಿಲುಮುಟ್ಟಿತು.

ದೇವಾಲಯ ಒಳಗೆ ತೆರಳಿದ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕತ್ರಯರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪರಿವರ್ತನಾ ಯಾತ್ರೆಯ ರಥವನ್ನೇರಿ ಯಡಿಯೂರಪ್ಪ ಕಾರ್ಯಕರ್ತರತ್ತ ಕೈಬೀಸಿ ನಮಸ್ಕರಿಸಿದರು. ರಥದಲ್ಲಿ ಬಿಎಸ್‍ವೈ ಜೊತೆಗೆ ಶೋಭಾ ಕರಂದ್ಲಾಜೆ, ಸದಾನಂದ ಗೌಡ, ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮತ್ತಿತರರಿದ್ದರು.